ಬೆಂಗಳೂರು: ನಗರದ ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ ಟ್ರಾನ್ಸ್‌ಫಾರ್ಮರ್‌ಗಳ ಪೈಕಿ 2023ರ ಮಾ.30ರವರೆಗೆ ಒಟ್ಟು 1911 ಅನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಬೆಸ್ಕಾಂ ಗುರುವಾರ ಮಾಹಿತಿ ನೀಡಿತು.
ಪಾದಚಾರಿ ಮಾರ್ಗಗಳ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡ್ ಜಿ.ಬಿ. ಅತ್ರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ನಡೆಸಿತು. ವಿಚಾರಣೆ ವೇಳೆ ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕುರಿತಂತೆ ಬೆಸ್ಕಾಂ ಪ್ರಧಾನ ವ್ಯಸ್ಥಾಪಕ (ಪ್ರೊಕ್ಯೂರ್‌ಮೆಂಟ್) ಟಿ.ಎಂ. ಶಿವಪ್ರಕಾಶ್ ಸಲ್ಲಿಸಿದ ಪ್ರಮಾಣ ಪತ್ರವನ್ನು ಬೆಸ್ಕಾಂ ಪರ ವಕೀಲರು ನ್ಯಾಯಪೀಠಕ್ಕೆ ಸಲ್ಲಿಸಿದರು.
ಪಾದಚಾರಿ ಮಾರ್ಗಗಳ ಮೇಲೆ ಅಳವಡಿಸಲಾಗಿದ್ದ 2,587 ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ 2023ರ ಮಾ.30ರವರೆಗೆ 1911 ಟ್ರಾನ್ಸ್ಫಾರ್ಮರಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಹಾಗೂ ಹೊಸ ಮಾದರಿಯ ಸ್ಪನ್‌ಪೋಲ್ ಸ್ವರೂಪಕ್ಕೆ ವರ್ಗಾಯಿಸಲಾಗಿದೆ. ಉಳಿದ 676 ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯವನ್ನು 2023ರ ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಈ ಪ್ರಮಾಣ ಪತ್ರವನ್ನು ದಾಖಲಿಸಿಕೊಂಡ ನ್ಯಾಯಪೀಠ, ಟ್ರಾನ್ಸ್‌ಫಾರ್ಮರ್‌ಗಳ ಸ್ಥಳಾಂತರ ಕಾರ್ಯ ಮುಂದುವರಿಸಬೇಕು. ಅದರ ಪ್ರಗತಿ ವರದಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿತು. ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ, ನಗರದ ರಸ್ತೆ ಬದಿಗಳಲ್ಲಿರುವ ವಿದ್ಯುತ್ ಪ್ರವರ್ತಕಗಳ ಸುತ್ತಮುತ್ತಲ ಭಾಗಗಳಲ್ಲಿ ನೈರ್ಮಲ್ಯ ಕಾಪಾಡಬೇಕು. ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡದಂತೆ ತಡೆಯುವುದಕ್ಕಾಗಿ ಜಾಗೃತಿ ಫಲಕಗಳನ್ನು ಅಳವಡಿಸಬೇಕು ಎಂದು ನ್ಯಾಯಪೀಠ ತಿಳಿಸಿತ್ತು.
ಈ ಹಿಂದೆ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ರಸ್ತೆಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳನ್ನು ಮೂರು ತಿಂಗಳಲ್ಲಿ ಸ್ಥಳಾಂತರಿಸಿ, ಆ ವರದಿ ಸಲ್ಲಿಸಬೇಕು ಎಂದು ಬೆಸ್ಕಾಂಗೆ ಹೈಕೋಟ್ ಸೂಚನೆ ನೀಡಿತ್ತು. ಜೊತೆಗೆ ಪಾದಚಾರಿ ಮಾರ್ಗದ ಟ್ರಾನ್ಸ್‌ಫಾರ್ಮರ್ ತೆರವು ಕಾರ್ಯ ಪೂರ್ಣಗೊಳಿಸಿ, ಅನುಷ್ಠಾನ ವರದಿ ಸಲ್ಲಿಸುವಂತೆ ಕೋರ್ಟ್ ಸೂಚನೆ ನೀಡಿತ್ತು.
ಬೆಂಗಳೂರು ಮಹಾನಗರದ ಪಾದಚಾರಿ ಮಾರ್ಗದಲ್ಲಿ 5,784 ಟ್ರಾನ್ಸ್ಫಾರ್ಮರ್ಗಳಿದ್ದು, ಹಂತ ಹಂತವಾಗಿ ಸ್ಥಳಾಂತರಿಸುತ್ತೇವೆ ಮತ್ತು ತೆರವು ಕಾರ್ಯ ಮಾಡುತ್ತೇವೆ. ಇಲ್ಲವೇ ಸಾರ್ವಜನಿಕರಿಗೆ ತೊಂದರೆಯಾಗದಂತೆ ಟಿಸಿಗಳನ್ನು ಕಂಬಗಳ ಮೇಲೆ ಇರಿಸಲಾಗುತ್ತಿದೆ. ಈಗಾಗಲೇ 2017ರಲ್ಲಿ 3,194, 2019ರಲ್ಲಿ ಎರಡು ಸೇರಿ ಒಟ್ಟು 3196 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರಿಸಿದ್ದೇವೆ ಎಂದು ಬೆಸ್ಕಾಂ ಈ ಮೊದಲು ಹೈಕೋರ್ಟ್‌ಗೆ ಮಾಹಿತಿ ನೀಡಿತ್ತು.
ಇನ್ನು 2022ರ ಆಗಸ್ಟ್ ಅಂತ್ಯದ ವೇಳೆಗೆ ಉಳಿದ 2,588 ಟ್ರಾನ್ಸ್ಫಾರ್ಮರ್ಗಳಲ್ಲಿ 1155ನ್ನು ತೆರವು ಮಾಡಲಾಗಿದೆ. 2023ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 1433 ಟ್ರಾನ್ಸ್‌ಫಾರ್ಮರ್‌ಗಳನ್ನು ಸ್ಥಳಾಂತರ ಮಾಡಲಾಗುವುದು ಎಂದು ಬೆಸ್ಕಾಂ ಈ ಮೊದಲು ತಿಳಿಸಿತ್ತು.
ಇದನ್ನೂ ಓದಿ: ಅಕ್ರಮ ಕೃಷಿ ಪಂಪ್‌ಸೆಟ್ ಸಕ್ರಮಗೊಳಿಸುವ ಯೋಜನೆ ಮುಂದುವರೆದಿದೆ: ಸಚಿವ ಸುನಿಲ್ ಕುಮಾರ್