ದೇವನಹಳ್ಳಿ: ಆರೋಗ್ಯ ಸಚಿವ ಸುಧಾಕರ್ ಮುಂದೆ ಡಿಹೆಚ್ಒ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್ಒ ರನ್ನು ಸ್ಥಳ ಸೂಚಿಸದೇ ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ಡಾ ಕೆ.ಮಂಜುಳಾದೇವಿ ಡಿಹೆಚ್ಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಅವಧಿಯಲ್ಲಿಯೇ ಕೋವಿಡ್ ಮೊದಲ ಅಲೆ ಮತ್ತು ಎರಡನೇ ಅಲೆ ನಿಭಾಯಿಸುವ ದೊಡ್ಡ ಜವಾಬ್ದಾರಿ ಇತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಹು ದೊಡ್ಡ ಜವಾಬ್ದಾರಿ ವಹಿಸಲಾಗಿತ್ತು. ವಿದೇಶದಿಂದ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡುವ ಮತ್ತು ಚಿಕಿತ್ಸೆ ನೀಡುವ ಜವಾಬ್ದಾರಿ ನಿರ್ವಹಣೆ ಮಾಡಬೇಕಿತ್ತು. ಬೆಂಗಳೂರು ನಗರಕ್ಕೆ ಅಂಟಿಕೊಂಡಿರುವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸಹ ಕೊವೀಡ್ ಪ್ರಕರಣ ಸಂಖ್ಯೆ ಹೆಚ್ಚಾಗಿದೆ.
ಓದಿ:ಪರ ಪುರುಷನ ಜೊತೆ ಬೈಕ್ನಲ್ಲಿ ತೆರಳಿದ್ದ ಗೃಹಿಣಿ ಸಾವು
ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ, ಬೆಡ್ ಕೊರತೆಯಿಂದ ಸೋಂಕಿತರ ಸಾವಿನ ಪ್ರಮಾಣ ಹೆಚ್ಚಳವಾಗಿತ್ತು. ಇದು ಸಹಜವಾಗಿ ಜನಪ್ರತಿನಿಧಿಗಳಿಗೂ ಬಿಸಿ ಮುಟ್ಟಿತ್ತು, ಇದೇ ಸಮಯದಲ್ಲಿ ಪೌರಾಡಳಿತ ಮತ್ತು ಸಕ್ಕರೆ ಸಚಿವರ ಮಾತಿಗೆ ಡಿಹೆಚ್ಒ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪವಿದೆ. ಈ ಬಗ್ಗೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೊಸಕೋಟೆಗೆ ಭೇಟಿ ನೀಡಿದ್ದಾಗ ಬಹಿರಂಗವಾಗಿಯೇ ಡಿಹೆಚ್ಒ ವಿರುದ್ಧ ಎಂಟಿಬಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಾನೇನಾದರೂ ಆರೋಗ್ಯ ಸಚಿವ ಆಗಿದ್ದರೆ 24 ಗಂಟೆಯೊಳಗೆ ಸಸ್ಪೆಂಡ್ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ ಮಂಜುಳಾದೇವಿ ಜಾಗಕ್ಕೆ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಇಂದಿರಾನಗರದ ಹಿರಿಯ ತಜ್ಞರಾದ ಡಾ.ತಿಪ್ಪೇಸ್ವಾಮಿಯನ್ನು ನಿಯೋಜಿಸಲಾಗಿದೆ.