ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಅಪರಾಧಗಳನ್ನು ದಾಖಲಿಸುವ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚುನಾವಣಾ ವಿಚಕ್ಷಣ ದಳ (ಫ್ಲೇಯಿಂಗ್ ಸ್ಕ್ವಾಡ್)ಕ್ಕೆ ಅಗತ್ಯ ತರಬೇತಿ ನೀಡುವಂತೆ ಮುಖ್ಯ ಚುನಾವಣಾ ಆಯೋಗ, ರಾಜ್ಯ ಚುನಾವಣಾ ಆಯೋಗ ಮತ್ತು ರಾಜ್ಯ ಪೊಲೀಸ್ ಇಲಾಖೆಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಎ.ಮಂಜು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಕೆ.ನಟರಾಜನ್ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಚುನಾವಣಾ ಅಕ್ರಮಗಳ ಕುರಿತು ವಿಚಕ್ಷಣಾ ದಳ ಪೊಲೀಸರಿಗೆ ನೀಡುವ ದೂರಿಗೆ ಸಂಬಂಧಿಸಿದಂತೆ ಬಹುತೇಕ ಪ್ರಕರಣಗಳಲ್ಲಿ ಚುನಾವಣೆ ನಡೆಯುವ ವೇಳೆ ಔಪಚಾರಿಕವಾಗಿರುತ್ತವೆ. ಅಂತಿಮವಾಗಿ ಕೆಲ ಸಂದರ್ಭಗಳಲ್ಲಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ವಿರುದ್ಧ ಪೊಲೀಸರು ಬಿ. ರಿಪೋರ್ಟ್ ಸಲ್ಲಿಸುತ್ತಾರೆ. ಸೋತ ಅಭ್ಯರ್ಥಿಗಳ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿರುತ್ತಾರೆ. ಹೀಗಾಗಿ ಸೂಕ್ತ ತರಬೇತಿ ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.
ಅಸಂಜ್ಞೆಯ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ ಅನುಮತಿ ಇಲ್ಲದೆ ಎಫ್ಐಆರ್ ದಾಖಲಿಸುವಂತಿಲ್ಲ ಎಂಬುದು ಪೊಲೀಸರಿಗೆ ಗೊತ್ತಿದ್ದರೂ ಈ ರೀತಿಯ ಘಟನೆಗಳು ನಡೆಯುತ್ತಿವೆ. ಭಾರತೀಯ ದಂಡ ಸಂಹಿತೆ 155ರ ಪ್ರಕಾರ ಅಸಂಜ್ಞೆಯ ಪ್ರಕರಣಗಳಲ್ಲಿ ಮ್ಯಾಜಿಸ್ಟ್ರೇಟ್ನಿಂದ ಅನುಮತಿ ಪಡೆದ ಪ್ರಕರಣಗಳ ತನಿಖೆ, ವಿಚಾರಣೆಯ ಕಾರ್ಯವಿಧಾನದಲ್ಲಿ ದೊಡ್ಡ ಮಟ್ಟದ ಉಲ್ಲಂಘನೆಗಳು ನಡೆಯುತ್ತಿರುತ್ತವೆ.
ಅಲ್ಲದೆ, ವಿಚಕ್ಷಣ ದಳದ ಸಿಬ್ಬಂದಿ ದೊಡ್ಡ ಮಟ್ಟದ ಹಣ ಮತ್ತು ಇತರೆ ವಸ್ತುಗಳನ್ನು ಪಡೆದುಕೊಂಡಿದ್ದರೂ ಆರೋಪಿಗಳು ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಮುಖ ನಿರ್ದೇಶನಗಳು.. ಸಂಜ್ಞೆಯೇತರ ಅಪರಾಧ ಪತ್ತೆಯಾದಲ್ಲಿ ಮಾಹಿತಿದಾರರು ಸಿಆರ್ಪಿಸಿ ಸೆಕ್ಷನ್ 152(2)ರಲ್ಲಿ ಮ್ಯಾಜಿಸ್ಟ್ರೇಟ್ರನ್ನು ಸಂಪರ್ಕಿಸಿ ಅನುಮತಿ ಪಡೆದುಕೊಳ್ಳಬಹುದು. ಇದಕ್ಕಾಗಿ ಮ್ಯಾಜಿಸ್ಟ್ರೇಟ್ 155(1) ಮನವಿ ಸಲ್ಲಿಸಿ ಅನುಮತಿ ಪಡೆದುಕೊಳ್ಳಬೇಕು. ಬಳಿಕ ಮ್ಯಾಜಿಸ್ಟ್ರೇಟ್ ವಿವೇಚನೆ ಬಳಸಿ ಅನುಮತಿ ಕೋಡಬೇಕು. ಆ ನಂತರ ಎಫ್ಐಆರ್ ದಾಖಲಿಸಬೇಕು.
-ಐಪಿಸಿ ಸೆಕ್ಷನ್ 188 ಸಂಜ್ಞೆಯ ಅಪರಾಧ ಆದರೂ ದೂರುದಾರರು (ವಿಚಕ್ಷಣಾಧಿಕಾರಿಗಳು) ಸಿಆರ್ಪಿಸಿ 154(1)ರ ಅಡಿಯಲ್ಲಿ ಪೊಲೀಸರಿಗೆ ದೂರು ನೀಡುವಂತಿಲ್ಲ. ಆದರೆ, ಪಂಚನಾಮೆ ಸಿದ್ದತೆ ಪಡೆಸಿ ದೂರುದಾರರು ಸಾಕ್ಷ್ಯಗಳ ಸಮ್ಮುಖದಲ್ಲಿ ದಾಖಲೆಗಳನ್ನು ವಶಪಡಿಸಿಕೊಳ್ಳಬಹುದು. ಇದರ ಆಧಾರದಲ್ಲಿ ಮೇಲೆ ಚುನಾವಣಾ ಆಯೋಗ ಅನುಮತಿ ಪಡೆದು ಸಿಆರ್ಪಿಸಿ 200(2)(ಡಿ) ಅಡಿ ಮ್ಯಾಜಿಸ್ಟ್ರೇಟ್ ಮುಂದೆ ದೂರು ದಾಖಲಿಸಬೇಕು ಎಂದು ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ ಏನು ?: ಹಾಸನ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿದ್ದ ಎ.ಮಂಜು ನಿಷೇಧಾಜ್ಞೆ ಜಾರಿಯಾಗಿದ್ದರೂ ಹಾಸನದ ಮಲ್ಲಿಗೆ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿದ್ದರು. ಈ ಸಂಬಂಧ 2019ರ ಏಪ್ರಿಲ್ 17ರಂದು ಚುನಾವಣಾ ವಿಚಕ್ಷಣ ದಳದ ಅಧಿಕಾರಿಗಳು ದೂರು ಸಲ್ಲಿಸಿದ್ದರು. ಅಲ್ಲದೆ, ವಿವಿಧ ಕಾಯ್ದೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.
ಅಲ್ಲದೆ, ಘಟನೆ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮಂಜು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣದಲ್ಲಿ ಸಂಜ್ಞೆಯ ಆರೋಪಗಳಲ್ಲಿ ನ್ಯಾಯಾಲಯದ ಅನುಮತಿ ಇಲ್ಲದೆ ಎಫ್ಐಆರ್ ದಾಖಲಿಸಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರವಿಲ್ಲ. ಹೀಗಾಗಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಗೊಳಿಸುತ್ತಿರುವುದಾಗಿ ನ್ಯಾಯಪೀಠ ತಿಳಿಸಿದೆ.
ಇದನ್ನೂ ಓದಿ: ಜನವಸತಿ ರಹಿತ ಗ್ರಾಮಗಳ ಪಟ್ಟಿ ನೀಡಲು ಕಾಲಾವಕಾಶ ಕೋರಿದ ಸರ್ಕಾರ: ಹೈಕೋರ್ಟ್ ತರಾಟೆ