ಬೆಂಗಳೂರು: ಕೇಂದ್ರದ ಹೊಸ ಮೋಟಾರು ಕಾಯ್ದೆ ಜಾರಿಯಿಂದಾಗಿ ಕಳೆದ ಒಂದು ತಿಂಗಳಲ್ಲಿ ಸುಮಾರು 2.50 ಲಕ್ಷ ಸಂಚಾರಿ ಉಲ್ಲಂಘನೆ ಪ್ರಕರಣಗಳಿಗೆ ಕಡಿವಾಣ ಬಿದ್ದಿದೆ.
ಸೆ.3ರಂದು ನಗರದಲ್ಲಿ ಹೊಸ ಸಂಚಾರಿ ನಿಯಮ ಅಸ್ತಿತ್ವಕ್ಕೆ ಬಂದಿದ್ದು, ಕಳೆದೊಂದು ತಿಂಗಳಲ್ಲಿ 5,36,797 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 10.67 ಕೋಟಿ ರೂ. ದಂಡ ಸಂಗ್ರಹವಾಗಿದೆ. ಕಳೆದ ಜನವರಿಂದ ಆಗಸ್ಟ್‌ವರೆಗೂ ಹೋಲಿಸಿದರೆ ಕಡಿಮೆ ದಂಡ ಹಾಗೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆದ್ರೆ, ದುಬಾರಿ ದಂಡ ನಿಯಮ ಜಾರಿಯಿಂದ ಸೆಪ್ಟೆಂಬರ್‌ನಲ್ಲಿ ಅಧಿಕ ದಂಡ ಸಂಗ್ರಹ ಹಾಗೂ 2.50 ಲಕ್ಷ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗಿವೆ. ಈ ಮೂಲಕ ವಾಹನ ಸವಾರರಲ್ಲಿ ಟ್ರಾಫಿಕ್ ಉಲಂಘನೆ ಮಾಡ ಕೂಡದು ಎಂಬ ಮನೋಭಾವವನ್ನು ಜನರು ಬೆಳೆಸಿಕೊಂಡಿರುವುದು ಆಶಾದಾಯಕ ಬೆಳವಣಿಗೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.
ಕಳೆದ ಆಗಸ್ಟ್ ನಲ್ಲಿ 8,45,929 ಪ್ರಕರಣಗಳ ದಾಖಲಿಸಿಕೊಂಡು 8,75,90,250 ರೂ. ದಂಡ ಸಂಗ್ರಹಿಸಿದ್ದ ಪೊಲೀಸರು ಸೆಪ್ಟೆಂಬರ್ ನಲ್ಲಿ 5,36,797 ಪ್ರಕರಣ ದಾಖಲಿಸಿ 10.67 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ವಿವಿಧ ಸಂಚಾರಿ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ಸ್ಥಳದಲ್ಲೇ ಪತ್ತೆ ಹಚ್ಚಿ ಅವರಿಂದ 2,84,717 ರೂ. ಸಂಗ್ರಹಿಸಿದರೆ ಉಳಿದ 3.8 ಕೋಟಿ ರೂ. ಚಲನ್ ಜನರೇಟ್ ಮಾಡಿ ವಾಹನ ಸವಾರರಿಗೆ ನೋಟಿಸ್ ನೀಡಿ ಜುಲ್ಮಾನೆ ವಸೂಲಿ ಮಾಡಲಾಗಿದೆ. ಅದೇ ರೀತಿ ಡ್ರಂಕ್ ಅಂಡ್ ಡ್ರೈವ್ ಕೇಸ್ಗಳು ಸಹ ತಹಬದಿಗೆ ಬಂದಿದ್ದು, ಈ ಮೂಲಕ ರಸ್ತೆ ಅಪಘಾತ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದು ರವಿಕಾಂತೇಗೌಡ ತಿಳಿಸಿದ್ದಾರೆ.