ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ಸವಾರರ ವಿರುದ್ಧ ನಗರ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ನಿಯಮ ಉಲ್ಲಂಘಿಸಿದವರಿಗೆ ಬರೆ ಎಳೆಯುವ ಕಾರ್ಯ ಮಾಡುತ್ತಿದ್ದಾರೆ.
ಇಂದು ನಗರದಲ್ಲಿ 144 ಸೆಕ್ಷನ್ ಜಾರಿ ಇರುವ ಕಾರಣ ವಿನಾಕಾರಣ ಓಡಾಟ ಮಾಡುವವರನ್ನು ಪೊಲೀಸರು ನಿಲ್ಲಿಸಿ ತಪಾಸಣೆ ನಡೆಸಲಿದ್ದಾರೆ. ಹಾಗೆಯೇ ಬಹಳಷ್ಟು ಬಾರಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ವ್ಯಕ್ತಿಗಳ ಡಿಎಲ್ ಅನ್ನು ವಶಕ್ಕೆ ಪಡೆಯಲಿದ್ದಾರೆ.
ಇಂದು ಸಂಚಾರ ಪೂರ್ವ ವಿಭಾಗದ ಜೆ.ಬಿ. ನಗರ ಸಂಚಾರ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಸಬ್ ಇನ್ಸಪೆಕ್ಟರ್ ರಾಮಚಂದ್ರೇಗೌಡ ರವರು ಸುಮಾರು 41 ಬಾರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ್ದ ದ್ವಿ-ಚಕ್ರ ವಾಹನದ ಮಾಲೀಕರೊಬ್ಬರಿಂದ 20 ಸಾವಿರ ರೂಪಾಯಿ ದಂಡ ವಸೂಲು ಮಾಡಿದ್ದಾರೆ.
ಪದೇ ಪದೇ ಸಂಚಾರ ನಿಯಮ ಉಲ್ಲಂಘಿಸುವ ಈ ವ್ಯಕ್ತಿ ಇಂದು ಕೂಡ ನಿಯಮ ಉಲ್ಲಂಘನೆ ಮಾಡಿ ವಾಹನ ಚಲಾಯಿಸುತ್ತಿದ್ದನು. ಹೀಗಾಗಿ ಪೊಲೀಸರು ಈತನನ್ನು ಹಿಡಿದು ದಂಡ ವಿಧಿಸಿದ್ದಾರೆ. ಸಂಚಾರಿ ನಿಯಮಗಳ ಬಗ್ಗೆ ಅರಿವು ಮೂಡಿಸಲು ಆತನನ್ನು ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿದೆ.