ಬೆಂಗಳೂರು : ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಾಫಿಕ್ ಪೊಲೀಸ್ ಇಲಾಖೆ ಮೇಲೆ ಜನರು ಆಕ್ರೋಶ ಹೊರ ಹಾಕುತ್ತಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಸೂಚನೆ ಮೇರೆಗೆ, ಇಂದು ನಗರ ಜಂಟಿ ಟ್ರಾಫಿಕ್ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ನೇತೃತ್ವದಲ್ಲಿ ಎಎಸ್ಐ ಮೇಲ್ಪಟ್ಟದ ಅಧಿಕಾರಿಗಳ ಜೊತೆ ಸಭೆ ನಡೆಯಿತು.
ಅರಮನೆ ರಸ್ತೆಯ ಗಾಯತ್ರಿ ವಿಹಾರ್ ಸಭಾಂಗಣದಲ್ಲಿ ಕಿರಿಯ ಪೊಲೀಸ್ ಸಿಬ್ಬಂದಿ ಜತೆಗೆ ಸಭೆ ನಡೆಸಿದ ಟ್ರಾಫಿಕ್ ಕಮಿಷನರ್, ಸಾರ್ವಜನಿಕರೊಂದಿಗೆ ಹಾಗೂ ವಾಹನ ಸವಾರರೊಂದಿಗೆ ವರ್ತನೆ ಹೇಗಿರಬೇಕು ಎಂಬುದರ ಬಗ್ಗೆ ಕಿವಿಮಾತು ಹೇಳಿದರು. ಕರ್ತವ್ಯದ ವೇಳೆ ವಾಹನ ಸವಾರರು ನಿಯಮ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು.
ಅನುಚಿತ ವರ್ತನೆ ತೋರದೆ ಸಾರ್ವಜನಿಕರ ವಿಶ್ವಾಸ ಗಳಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕ ಪ್ರದೇಶಗಳಲ್ಲಿ ಪೊಲೀಸರ ನಡವಳಿಕೆ ಉತ್ತಮವಾಗಿರಬೇಕು ಎಂದು ಬುದ್ಧಿಮಾತು ಹೇಳಿದರು. ಸಭೆ ಬಳಿಕ ಮಾತನಾಡಿದ ರವಿಕಾಂತೇಗೌಡ ಅವರು, 'ಕಳೆದ ಎರಡು-ಮೂರು ದಿನಗಳಲ್ಲಿ ಟೋಯಿಂಗ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಘಟನೆಗಳ ಬಗ್ಗೆ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಇದು ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ಎರಡು ದಿನಗಳಲ್ಲಿ ಎರಡು ಘಟನೆಗಳ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಈ ಪೈಕಿ ಜೀವನ್ ಭೀಮಾನಗರದಲ್ಲಿ ಟೋಯಿಂಗ್ ವಾಹನದ ಹಿಂದೆ ಬೈಕ್ ಸವಾರ ಬೈಕಿಗಾಗಿ ಟೋಯಿಂಗ್ ಸಿಬ್ಬಂದಿ ಬಳಿ ಮನವಿ ಮಾಡುವ ವಿಡಿಯೋ ಹರಿದಾಡಿತ್ತು. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಬೆನ್ನಲೇ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಸೂಚಿಸಿದ್ದೆ. ಅಬ್ರಾಹಂ ಎಂಬುವರ ಬೈಕ್ ಅನ್ನ ಅನೌನ್ಸ್ ಮಾಡದೆ ಟೋಯಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಅಬ್ರಾಹಂ ಎಂಬುವನನ್ನು ಕರೆಯಿಸಿ ವಿಚಾರಣೆ ಮಾಡಲಾಗಿದೆ. ಅನೌನ್ಸ್ ಮಾಡಿರುವುದರ ಬಗ್ಗೆ ನಮ್ಮ ಬಳಿ ವಿಡಿಯೋ ಇದೆ. ಅವರು ಟೋಯಿಂಗ್ ಮಾಡುವಾಗ ಬಂದಿಲ್ಲ, ಬೈಕ್ ಟೋಯಿಂಗ್ ಮಾಡಿ ತೆಗೆದುಕೊಂಡು ಹೋಗುವಾಗ, ಗಾಡಿಯ ಹಿಂದೆ ಅವರು ಓಡಿದ್ದಾರೆ. ನಂತರ ಮುಂದೆ ಹೋಗಿ ಅವರ ವಾಹನವನ್ನು ಬಿಟ್ಟು ಕಳುಹಿಸಲಾಗಿದೆ. ಯಾವುದೇ ದಂಡವನ್ನು ಸಹ ಅಬ್ರಾಹಂನಿಂದ ಕಟ್ಟಿಸಿಕೊಂಡಿಲ್ಲ. ವಿಡಿಯೋ ಮಾಡಿರೋ ವ್ಯಕ್ತಿ ಈ ವಿಡಿಯೋವನ್ನ ಎಡಿಟ್ ಮಾಡಿ ಹಾಕಿದ್ದಾರೆ. ಅದಕ್ಕಾಗಿ ಆ ವ್ಯಕ್ತಿಗೂ ನೋಟಿಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಅಬ್ರಾಹಂ, ನೋ ಪಾರ್ಕಿಂಗ್ ಪ್ರದೇಶದಲ್ಲಿ ಗಾಡಿ ನಿಲ್ಲಿಸಿದ್ದೆ. ಟ್ರಾಫಿಕ್ ಪೊಲೀಸರು ಅನೌನ್ಸ್ ಮಾಡಿದ್ದರು. ಕೆಲ ಸಮಯ ಬಳಿಕ ಬೈಕ್ ಬಿಡುವಂತೆ ಪೊಲೀಸರಲ್ಲಿ ಮನವಿ ಮಾಡಿಕೊಂಡೆ. ಸ್ವಲ್ಪ ದೂರ ಹೋಗಿ ಟೋಯಿಂಗ್ ಮಾಡಿದ್ದ ಬೈಕ್ ರಿಲೀಸ್ ಮಾಡಿದರು. ನನ್ನ ಬಳಿ ಯಾವುದೇ ದಂಡ ಕಟ್ಟಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಮತ್ತೊಂದು ಘಟನೆಯಲ್ಲಿ ಮಹಿಳೆ ಮೇಲೆ ಟ್ರಾಫಿಕ್ ಎಎಸ್ಐ ಹಲ್ಲೆ ಬಗ್ಗೆ ಮಾತನಾಡಿದ ಆಯುಕ್ತರು, 'ಎಸ್.ಜೆ.ಠಾಣಾ ವ್ಯಾಪ್ತಿಯಲ್ಲಿ ರಸ್ತೆಯ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದಾರೆ ಅಂತಾ ಮಾಹಿತಿ ಬರುತ್ತೆ. ಅದರಂತೆ ನಮ್ಮ ಸಿಬ್ಬಂದಿ ವಾಹನಗಳನ್ನು ಟೋಯಿಂಗ್ ಮಾಡಲು ಹೋಗಿದ್ದರು. ಈ ವೇಳೆ ಮಹಿಳೆ ಹಾಗೂ ನಮ್ಮ ಸಿಬ್ಬಂದಿ ನಡುವೆ ಜಗಳ ಆಗಿದೆ.
ಆ ಮಹಿಳೆ ಅಲ್ಲಿ ಪಾರ್ಕಿಂಗ್ ಮಾಡುವವರ ಬಳಿ ಹಣ ಪಡೆಯುತ್ತಿದ್ದಳು. ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಆದ್ರೂ ಮಹಿಳೆ ಮೇಲೆ ಕೈ ಮಾಡಿರುವ ನಮ್ಮ ಸಿಬ್ಬಂದಿಯ ವರ್ತನೆಯು ಸರಿ ಇಲ್ಲ ಅಂತಾ ಅಮಾನತು ಮಾಡಲಾಗಿದೆ. ಇದರಿಂದ ಇಂತಹ ಘಟನೆ ಮುಂದೆ ಆಗದಂತೆ ನೋಡಿಕೊಳ್ಳಲು ಇಂದು ಸಭೆ ಮಾಡಲಾಗಿದೆ ಎಂದು ನಗರ ಜಂಟಿ ಟ್ರಾಫಿಕ್ ಪೊಲೀಸ್ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ ತಿಳಿಸಿದರು.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ