ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಹನ ಸವಾರರಿಗೆ ಟ್ರಾಫಿಕ್ ಇಲಾಖೆ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸುತ್ತ ಬಂದಿದ್ದಾರೆ. ಇದೀಗ ಪುಲಕೇಶಿನಗರ ಟ್ರಾಫಿಕ್ ಇನ್ಸ್ಪೆಕ್ಟರ್ ಗಣೇಶ್ ವಾಹನ ಸವಾರರಿಗೆ ಜಾಗೃತಿಯನ್ನು ವಿನೂತನವಾಗಿ ಮೂಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟ್ರಾಫಿಕ್ ಇನ್ಸ್ಪೆಕ್ಟರ್ ಗಣೇಶ್ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸಲುವಾಗಿ ತಮ್ಮ ಕೈಯಿಂದಲೇ ಹಣ ಹಾಕಿ ರಸ್ತೆ ಸುರಕ್ಷತೆ ಬಗ್ಗೆ ಯಮಧರ್ಮರಾಜನ ಪಾತ್ರಧಾರಿಯಿಂದ ಬೀದಿ ನಾಟಕ ಮಾಡಿಸಿದ್ದಾರೆ.
ಯಮಧರ್ಮರಾಜನ ಬಾಯಲ್ಲಿ ಈಗಿನ ವಾಹನ ಸವಾರರು ಮಾಡುವ ಕೆಲ ತಪ್ಪುಗಳು, ಹಾಗೆಯೇ ವಾಹನ ಸವಾರರು ಯಾವ ರೀತಿ ಜಾಗೃತಿಯಿಂದ ಇರಬೇಕೆಂಬ ಸಂದೇಶವನ್ನು ರವಾನಿಸಿದ್ದಾರೆ.
ಅಷ್ಟು ಮಾತ್ರವಲ್ಲದೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ, ಸೀಟ್ ಬೆಲ್ಟ್ ಹಾಕದೆ ಚಾಲನೆ ಮಾಡುವ ವಾಹನ ಸವಾರರಿಗೆ ಸಬ್ ಇನ್ಸ್ಪೆಕ್ಟರ್ ಗಣೇಶ್ ಬುದ್ಧಿವಾದ ಹೇಳಿ ಗುಲಾಬಿ ಹೂ ನೀಡಿದ್ದಾರೆ. ಇನ್ಸ್ಪೆಕ್ಟರ್ ಅವರ ಈ ಕಾಳಜಿಗೆ ವಾಹನ ಸವಾರರು ಹಾಗೂ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.