ಬೆಂಗಳೂರು : ಮದ್ಯದ ಅಮಲಿನಲ್ಲಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಟ್ರಾಫಿಕ್ ಎಎಸ್ಐಗೆ ಗುದ್ದಿದ ಘಟನೆ ಪೀಣ್ಯಾ ಫ್ಲೈ ಓವರ್ ಬಳಿ ತಡರಾತ್ರಿ ನಡೆದಿದೆ. ಕಾಮಗಾರಿ ಕಾರ್ಯ ಪ್ರಗತಿಯಲ್ಲಿರುವುದರಿಂದ ಫ್ಲೈ ಓವರ್ ಮೇಲೆ ಸಂಚಾರ ಸ್ಥಗಿತಗೊಳಿಸಿರುವುದನ್ನ ತಿಳಿಯದೇ ವೇಗವಾಗಿ ಬಂದ ದ್ವಿಚಕ್ರ ವಾಹನ ಸವಾರ, ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಶೇಖರಯ್ಯಗೆ ಗುದ್ದಿದ್ದಾನೆ. ಪರಿಣಾಮ ಎಎಸ್‌ಐ ಕೈಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ: ಗಸ್ತಿನಲ್ಲಿದ್ದ ಬಾಣಸವಾಡಿ ಪೊಲೀಸ್ ಠಾಣಾ ಸಿಬ್ಬಂದಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಲ್ಲೆಗೊಳಗಾದವರನ್ನ ಬಾಣಸವಾಡಿ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ಗಳಾದ ಬಸವರಾಜು, ಮುಜಾಫರ್ ಎಂದು ಗುರುತಿಸಲಾಗಿದೆ.
ವಾರದ ಹಿಂದೆ ಬಸವರಾಜು ಮತ್ತು ಮುಜಾಫರ್ ತಮ್ಮ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಗಸ್ತು ತಿರುಗುತ್ತಿದ್ದಾಗ ಅನುಮಾನಾಸ್ಪದವಾಗಿ ಆಟೋದಲ್ಲಿ ಓಡಾಡುತ್ತಿರುವವರನ್ನು ತಡೆದು ವಿಚಾರಣೆ ನಡೆಸಿದ್ದರು. ಈ ವೇಳೆ, ಆಟೋದಲ್ಲಿದ್ದ ಮೂವರು ದುಷ್ಕರ್ಮಿಗಳು ವಾಗ್ವಾದಕ್ಕಿಳಿದಿದ್ದರು. ನಂತರ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಿ ಕಾರ್ಯಾಚರಣೆ ನೆಡೆಸಲಾಗುತ್ತಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಇಂದು ಮಾಸ್ಕೋ ಜತೆ ವಿಡಿಯೋ ಕಾನ್ಫರೆನ್ಸ್ ನಡೆಸಲಿರುವ ಉಕ್ರೇನ್.. ಈಗಲಾದರೂ ಬೀಳುತ್ತಾ ಯುದ್ಧಕ್ಕೆ ಬ್ರೇಕ್?