ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು 753ಕ್ಕೆ ಏರಿಕೆಯಾಗಿದ್ದು, ಇಂದು ಒಂದೇ ದಿನ 48 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಇವುಗಳಲ್ಲಿ ದಾವಣಗೆರೆಯಿಂದ 14, ಬೆಂಗಳೂರಿನಿಂದ 7, ಬೆಳಗಾವಿಯಿಂದ 11, ಉತ್ತರ ಕನ್ನಡದಿಂದ 12 ಕೊರೊನಾ ಪ್ರಕರಣಗಳು ವರದಿಯಾಗಿವೆ.
ರಾಜ್ಯಾದ್ಯಂತ ಒಟ್ಟು 25,865 ವ್ಯಕ್ತಿಗಳ ಮೇಲೆ ನಿಗಾ ವಹಿಸಲಾಗಿದೆ. ಒಟ್ಟಾರೆ ರಾಜ್ಯದಲ್ಲಿ ಈವರೆಗೆ ಪರೀಕ್ಷಿಸಲಾಗಿರುವ 98,081 ಮಾದರಿಗಳ ಪೈಕಿ 753 ಮಾದರಿಗಳಲ್ಲಿ ಕೊರೊನಾ ಸೋಂಕು ಖಚಿತಗೊಂಡಿದೆ.. ಇವತ್ತು 4,546 ಜನರ ಗಂಟಲ ದ್ರವದ ಮಾದರಿಗಳನ್ನು ಲ್ಯಾಬ್ ಪರೀಕ್ಷೆಗೊಳಪಡಿಸಲಾಗಿದೆ.
ರಾಜ್ಯದ ಒಟ್ಟು ಸೋಂಕಿತರಲ್ಲಿ ಈವರೆಗೆ 30 ಜನ ಸಾವನ್ನಪ್ಪಿದ್ದು, 376 ಜನ ಗುಣಮುಖರಾಗಿದ್ದಾರೆ. ಉಳಿದ 340 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕಿಸಲಾಗಿದೆ, 5 ಜನರನ್ನು ತೀವ್ರ ನಿಗಾ ಘಟಕಗಳಲ್ಲಿ ಇರಿಸಲಾಗಿದೆ..
ಕೋವಿಡ್ ಸೋಂಕಿನ ಅಂಕಿ- ಅಂಶಗಳಲ್ಲಿ ಮಾರ್ಚ್ ನಲ್ಲಿ ಮೂರನೇ ಸ್ಥಾನದಲ್ಲಿದ್ದ ಕರ್ನಾಟಕ, ಇಂದು ಹದಿಮೂರನೇ ಸ್ಥಾನದಲ್ಲಿದೆ. ಶೇ.5.97 ನ ರಾಷ್ಟ್ರೀಯ ಸರಾಸರಿಗೆ ಹೋಲಿಸಿದ್ರೆ ರಾಜ್ಯದ ಸರಾಸರಿ ಶೇ.3.13 ಇದೆ.
ಕೋವಿಡ್ ನಿಯಂತ್ರಣ ಕೆಲಸಕ್ಕೆ ವೈದ್ಯಕೀಯ ತಜ್ಞರು, ಬೋಧಕರು ಕಡ್ಡಾಯ;
ಕೋವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಹಿರಿಯ ತಜ್ಞ ವೈದ್ಯರು, ವೈದ್ಯ ಬೋಧಕರುಗಳು ಕಡ್ಡಾಯವಾಗಿ ಕೋವಿಡ್ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ನಿರ್ದೇಶನ ಹೊರಡಿಸಿದ್ದು, ಸಂಬಂಧಪಟ್ಟ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಈ ಕುರಿತಂತೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ.