ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಿಜೆಪಿ ನಿಯೋಗ ನಾಳೆ ಸ್ಥಳಕ್ಕೆ ಭೇಟಿ ನೀಡಲಿದೆ.
ನಾಳೆ ಬೆಳಗ್ಗೆ ಗಲಭೆ ಪ್ರದೇಶಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲಿದ್ದು, ಬಳಿಕ ವರದಿಯನ್ನು ರಾಜ್ಯ ಸರ್ಕಾರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಿಗೆ ನೀಡಲಿದೆ.
ಆರು ಸದಸ್ಯರ ನಿಯೋಗ ಸ್ಥಳಕ್ಕೆ ಭೇಟಿ ನೀಡಲಿದ್ದು, ನಿಯೋಗದಲ್ಲಿ ಬಿಜೆಪಿ ಉಪಾಧ್ಯಕ್ಷರಾದ ಅರವಿಂದ ಲಿಂಬಾವಳಿ, ಮಾಲೀಕಯ್ಯ ಗುತ್ತೇದಾರ್, ಎಂ.ಶಂಕರಪ್ಪ, ಸಂಸದರಾದ ಪಿ.ಸಿ. ಮೋಹನ್, ಎ. ನಾರಾಯಣಸ್ವಾಮಿ ಹಾಗೂ ಎಸ್.ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಇರಲಿದ್ದಾರೆ.
ಈ ತಂಡ ನಾಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರ ಮನೆ, ಅವರ ತಮ್ಮಂದಿರು ಮತ್ತು ಅವರ ಅಮ್ಮನವರ ಮನೆಗೆ ಭೇಟಿ ನೀಡಲಿದೆ. ಗಲಭೆ ಪೀಡಿತ ಇತರ ಪ್ರದೇಶಕ್ಕೆ ಭೇಟಿ ನೀಡಲಿರುವ ನಿಯೋಗ, ಪೊಲೀಸ್ ಠಾಣೆಗಳಿಗೂ ಹೋಗಿ ಪರಿಶೀಲನೆ ನಡೆಸಲಿದೆ.
ಈ ಗಲಭೆ ಪ್ರಕರಣ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ನಿಯೋಗ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದೀಗ ಬಿಜೆಪಿ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ.