ಬೆಂಗಳೂರು: ವಿಧಾನಪರಿಷತ್ ನಾಲ್ಕು ಸ್ಥಾನಗಳಿಗೆ ಅ.28 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಪದವೀಧರರು ಹಾಗೂ ಶಿಕ್ಷಕ ಕ್ಷೇತ್ರದ ಮತದಾರರನ್ನು ಓಲೈಸುವ ಕಾರ್ಯದಲ್ಲಿ ಮೂರು ಪಕ್ಷಗಳು ತೊಡಗಿವೆ.
ವಿಧಾನಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಈಶಾನ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಪದವೀಧರ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕೊನೆ ದಿನವಾಗಿದ್ದು, ಮೂರು ಪಕ್ಷಗಳ ನಾಯಕರು ತರಾತುರಿ ಸಜ್ಜಾಗುತ್ತಿದ್ದು, ಮತದಾರರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪೈಪೋಟಿ ನಡೆಸುತ್ತಿವೆ.
ನೇರ ಭೇಟಿ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಮತದಾರರನ್ನು ಸಂಪರ್ಕಿಸಿ ಮತಯಾಚಿಸುವ ಕೆಲಸವೂ ನಡೆದಿದ್ದು, ವಾಟ್ಸಪ್, ಮೊಬೈಲ್ ಸಂದೇಶ, ಇ-ಮೇಲ್ ಹಾಗೂ ಇತರ ಸಾಮಾಜಿಕ ಜಾಲತಾಣಗಳನ್ನು ಬಳಸಿ ಮತದಾರರನ್ನು ಓಲೈಸುತ್ತಿರುವ ಕಾರ್ಯದಲ್ಲಿ ಅಭ್ಯರ್ಥಿಗಳು ತೊಡಗಿದ್ದಾರೆ.
ಈ ಹಿಂದೆ ನಡೆದ ಚುನಾವಣೆ ವೇಳೆ ಪ್ರತಿ ತಾಲೂಕು, ಹೋಬಳಿ ಹಾಗೂ ಜಿಲ್ಲಾ ಮಟ್ಟದಲ್ಲಿ ಮತದಾರರನ್ನು ಸೇರಿಸಿ ದೊಡ್ಡ ಸಮಾವೇಶ ನಡೆಸಿ ಪ್ರಚಾರ ಮಾಡಲಾಗುತ್ತಿತ್ತು. ಜೊತೆಗೆ ಬಾಡೂಟದ ಭೋಜನ ವ್ಯವಸ್ಥೆ ಸಹ ಆಯೋಜಿಸಲಾಗುತಿತ್ತು. ಆದರೆ ಈಗ ಕೊರೊನಾ ಸೋಂಕು ಕಾರಣದಿಂದ ಇದಕ್ಕೆಲ್ಲಾ ಅಡ್ಡಿಯಾಗಿದ್ದು, ಸಾಮಾಜಿಕ ಜಾಲತಾಣ ಹಾಗೂ ಮೊಬೈಲ್‌ಗಳ ಮೂಲಕವೇ ಮತದಾರರನ್ನು ಸಂಪರ್ಕಿಸಿ ಮತ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ನಾಲ್ಕು ಕ್ಷೇತ್ರಗಳಿಗೆ ಈಗಾಗಲೇ ನಾಮಪತ್ರ ಸಲ್ಲಿಸುವ ಕಾರ್ಯ ಸಾಗಿದ್ದು, ಇಂದು ಆಗ್ನೇಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್‌ನ ರಮೇಶ್ ಬಾಬು, ಜೆಡಿಎಸ್ ನಿಂದ ಚೌಡರೆಡ್ಡಿ ತೂಪಲ್ಲಿ ನಾಮಪತ್ರ ಸಲ್ಲಿಸಿದರು.
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರವೀಣ್ ಕುಮಾರ್ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಅದೇ ರೀತಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್ ನಿಂದ ವಕೀಲ ಎ.ಪಿ. ರಂಗನಾಥ್ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ಅಭ್ಯರ್ಥಿಗಳು ನಾಳೆ ತಮ್ಮ ಉಮೇದುವಾರಕೆ ಸಲ್ಲಿಸಲಿದ್ದಾರೆ.
ಅ.1 ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಅ.8 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಅ.9, ನಾಮಪತ್ರ ಹಿಂದಕ್ಕೆ ಪಡೆಯಲು ಅ.12 ರಂದು ಕೊನೆಯ ದಿನವಾಗಿದೆ. ಅ. 28 ರಂದು ಚುನಾವಣೆ ನಡೆಯಲಿದ್ದು, ನವೆಂಬರ್ 2 ರಂದು ಫಲಿತಾಂಶ ಪ್ರಕಟವಾಗಲಿದೆ.