ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗಿದ್ದರೂ ಕೂಡ ಮಾಜಿ ಸಚಿವ ಡಿಕೆ ಶಿವಕುಮಾರ್ ರಾಜ್ಯಕ್ಕೆ ವಾಪಸಾಗುವುದು ವಿಳಂಬವಾಗಲಿದೆ.
ಅಕ್ರಮ ಹಣ ವರ್ಗಾವಣೆ ತಡೆ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಡಿಕೆಶಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಇಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದ್ದು, ತಮ್ಮ ಪರ ವಕೀಲರ ಜೊತೆ ಸಮಾಲೋಚಿಸಲು ನಿರ್ಧರಿಸಿರುವ ಡಿಕೆಶಿ ಇಂದು ದಿಲ್ಲಿಯಲ್ಲಿ ಉಳಿಯಲಿದ್ದಾರೆ.
ತಮ್ಮ ವಕೀಲರ ಜೊತೆ ಮುಂದಿನ ಕಾನೂನು ಹೋರಾಟಗಳ ಕುರಿತು ಅವರು ಚರ್ಚಿಸಲಿದ್ದಾರೆ. ನಾಳೆಯವರೆಗೆ ಕಾಯ್ದು ಸುಪ್ರೀಂಕೋರ್ಟ್ನ ನಿರ್ಧಾರ ನೋಡಿ ಅವರು ರಾಜ್ಯಕ್ಕೆ ಪ್ರಯಾಣಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಸುಪ್ರೀಂಕೋರ್ಟ್, ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡಿದರೆ ಶಿವಕುಮಾರ್ ಮತ್ತೆ ತಿಹಾರ್ ಜೈಲು ಸೇರಬೇಕಾಗುತ್ತದೆ. ಈ ಹಿನ್ನೆಲೆ ಸುಪ್ರೀಂ ನಿಲುವು ತಿಳಿದುಕೊಂಡು, ನಿರಾಳವಾದರೆ ಮಾತ್ರ ರಾಜ್ಯಕ್ಕೆ ವಾಪಸಾಗಲು ಶಿವಕುಮಾರ್ ನಿರ್ಧರಿಸಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ಎಲ್ಲಾ ಅಂದುಕೊಂಡಂತೆ ಆದಲ್ಲಿ ಡಿಕೆಶಿ ನಾಳೆ ಮಧ್ಯಾಹ್ನ ದೆಹಲಿಯಿಂದ ಹೊರಟು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ನಿನ್ನೆ ರಾತ್ರಿಯೇ ಜೈಲಿನಿಂದ ಹೊರಬಂದಿರುವ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಸಂದರ್ಭ, ನಾಳೆ ವಕೀಲರನ್ನು ಭೇಟಿ ಮಾಡಿ ಸಮಾಲೋಚಿಸುವುದಾಗಿ ತಿಳಿಸಿದ್ದಾರೆ. ಇದರಿಂದಾಗಿ ಇಂದು ಅವರು ನಗರಕ್ಕೆ ಬರಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು. ಆದರೂ ವಕೀಲರನ್ನು ಭೇಟಿ ಮಾಡಿ ಸಂಜೆ ವೇಳೆಗಾದರೂ ಅವರು ವಾಪಸ್ ಆಗುವ ನಿರೀಕ್ಷೆ ಹೊಂದಲಾಗಿತ್ತು.