ಬೆಂಗಳೂರು : ಸೀಲ್ಡೌನ್ ಆತಂಕಕ್ಕೆ ಸಿಲುಕಿದ್ದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದ ಎಲ್ಲಾ ಸಿಬ್ಬಂದಿಯನ್ನು ನಾಳೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಕೃಷ್ಣಾದ ಗೇಟ್ ಎದುರು ಕರ್ತವ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ, ಅತಿಥಿಗಳ ವಿವರ ದಾಖಲಿಸಿಕೊಳ್ಳುವ ಸಿಬ್ಬಂದಿ, ಕೃಷ್ಣಾದ ಒಳಗಡೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯೂ ಸೇರಿ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲಾ ಸಿಬ್ಬಂದಿಯನ್ನೂ ನಾಳೆ ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೃಷ್ಣಾದ ಜೊತೆಗೆ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ಕಾವೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರೂ ಸೇರಿ ಎಲ್ಲಾ ಸಿಬ್ಬಂದಿಗೂ ಕೊರೊನಾ ಪರೀಕ್ಷೆ ನಡೆಸಲಾಗುತ್ತದೆ.
ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಕಾನ್‌ಸ್ಟೆಬಲ್‌ವೊಬ್ಬರ ಪತಿಗೆ ಕೊರೊನಾ ಪಾಸಿಟಿವ್ ಬಂದು ಆತಂಕ ಸೃಷ್ಟಿಸಿತ್ತು. ಆದರೆ, ಮಹಿಳಾ ಕಾನ್ಸ್ಟೆಬಲ್ ಕೊರೊನಾ ಪರೀಕ್ಷೆ ವರದಿ ನೆಗೆಟಿವ್ ಬಂದಿತ್ತು. ಆದರೂ ಹೆಚ್ಚಿನ ಮುಂಜಾಗ್ರತಾ ಕ್ರಮವಾಗಿ ನಾಳೆ ಸಿಎಂ ಗೃಹ ಕಚೇರಿ ಕೃಷ್ಣಾ ಹಾಗೂ ಕಾವೇರಿ ನಿವಾಸದ ಎಲ್ಲಾ ಸಿಬ್ಬಂದಿಯನ್ನೂ ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ.