ಬೆಂಗಳೂರು : ಪ್ರವಾಹ ಪೀಡಿತ ಜಿಲ್ಲೆಗಳ ಪರಿಸ್ಥಿತಿಯ ಅಧ್ಯಯನಕ್ಕೆ ರಚನೆಗೊಂಡಿರುವ ಕಾಂಗ್ರೆಸ್ ಎರಡು ತಂಡಗಳು ನಾಳೆಯಿಂದ ಜಿಲ್ಲಾ ಪ್ರವಾಸ ಆರಂಭಿಸಲಿವೆ.
ಎರಡು ತಂಡವನ್ನು ರಚಿಸಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆದೇಶ ಹೊರಡಿಸಿದ್ದು, ಈ ತಂಡ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಯನ್ನು ಸಂಗ್ರಹಿಸಿ ಅಭಿಪ್ರಾಯಗಳನ್ನು ಸ್ವೀಕರಿಸಿ ಒಂದು ವರದಿಯನ್ನು ಸಿದ್ಧಪಡಿಸಿ ಪ್ರದೇಶ ಕಾಂಗ್ರೆಸ್ ಸಮಿತಿಗೆ ನೀಡಲಿದೆ. ಇದನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ತರುವ ಕಾರ್ಯವನ್ನು ಪಕ್ಷ ಮಾಡಲಿದೆ. ಎರಡು ತಂಡಗಳ ಪೈಕಿ ಬೆಳಗಾವಿ ವಿಭಾಗಕ್ಕೆ ಮಾಜಿ ಸಚಿವ ಹೆಚ್.ಕೆ .ಪಾಟೀಲ್ ಅಧ್ಯಕ್ಷರಾಗಿದ್ದು ಕಲಬುರಗಿ ವಿಭಾಗಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅಧ್ಯಕ್ಷರಾಗಿದ್ದಾರೆ.
ಹೆಚ್. ಕೆ .ಪಾಟೀಲ್ ಸಂಚಾರ:
ಬೆಳಗಾವಿ ವಿಭಾಗದಲ್ಲಿ ಹೆಚ್. ಕೆ .ಪಾಟೀಲ್ ನೇತೃತ್ವದ ತಂಡದಲ್ಲಿ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಆರ್. ಬಿ .ತಿಮ್ಮಾಪುರ್, ಉಮಾಶ್ರೀ, ಶಿವಾನಂದ ಪಾಟೀಲ್ ಹಾಗೂ ಮಾಜಿ ಸಂಸದ ಐ ಜಿ ಸನದಿ ಸದಸ್ಯರಾಗಿದ್ದು, ಇವರು ನಾಳೆ ಬೆಳಗ್ಗೆ 9 ರಿಂದ 11 ಗಂಟೆಯವರೆಗೆ ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶ ಹಾಗೂ ಗಂಜಿ ಕೇಂದ್ರಗಳಿಗೆ ಭೇಟಿ ಕೊಡಲಿದ್ದಾರೆ. ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಧೋಳ ತಾಲೂಕು, ಮಧ್ಯಾಹ್ನ 1 ರಿಂದ ಸಂಜೆ 3 ಗಂಟೆಯವರೆಗೆ ಜಮಖಂಡಿ ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ಅಥಣಿ ತಾಲ್ಲೂಕಿನ ಪ್ರವಾಹ ಪೀಡಿತ ಪ್ರದೇಶ, ನಿರಾಶ್ರಿತ ಹಾಗೂ ಗಂಜಿ ಕೇಂದ್ರಗಳಿಗೆ ಭೇಟಿ ಕೊಡಲಿದ್ದಾರೆ.
ಅಥಣಿಯಲ್ಲಿ ವಾಸ್ತವ್ಯ ಹೂಡುವ ತಂಡ :
ಆ.10 ರಂದು ಬೆಳಗ್ಗೆ 8.30ರಿಂದ 11.30ರವರೆಗೆ ರಾಯಭಾಗ ತಾಲೂಕು, 11.30ರಿಂದ ಮಧ್ಯಾಹ್ನ1 ಗಂಟೆಯವರೆಗೆ ಚಿಕ್ಕೋಡಿ ಹಾಗೂ ಸಂಜೆ 4 ರಿಂದ 6ರವರೆಗೆ ಬೆಳಗಾವಿ ತಾಲೂಕಿನಲ್ಲಿ ಸಂಚರಿಸಲಿದೆ. ಮುಂದಿನ ಪ್ರವಾಸ ವಿವರ ಪ್ರಕಟವಾಗಬೇಕಿದೆ.
ಈಶ್ವರ್ ಖಂಡ್ರೆ ಸಂಚಾರ:
ಕಲಬುರಗಿ ವಿಭಾಗದಲ್ಲಿ ಈಶ್ವರ್ ಖಂಡ್ರೆ ನೇತೃತ್ವದ ತಂಡದಲ್ಲಿ ಎಐಸಿಸಿ ಕಾರ್ಯದರ್ಶಿ ಹಾಗೂ ವಿಧಾನಪರಿಷತ್ ಸದಸ್ಯ ಎಂ.ಎಸ್ .ಬೋಸರಾಜ್, ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್, ಪ್ರಿಯಾಂಕ ಖರ್ಗೆ, ಶಾಸಕರಾದ ಶರಣಬಸಪ್ಪ ದರ್ಶನಾಪೂರ, ಡಾ ಅಜಯ್ ಸಿಂಗ್ ಹಾಗೂ ಸಂಸದ ನಾಸಿರ್ ಹುಸೇನ್ ಸದಸ್ಯರಾಗಿದ್ದು, ಇಂದು ರಾತ್ರಿ 8.50ಕ್ಕೆ ತಂಡ ರೈಲಿನ ಮೂಲಕ ರಾಯಚೂರಿನತ್ತ ಪ್ರಯಾಣ ಬೆಳೆಸಲಿದೆ.
ನಾಳೆ ಬೆಳಗ್ಗೆ 9ಕ್ಕೆ ರಾಯಚೂರು ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಿರುವ ಕ್ವಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ತಂಡ 9.30ಕ್ಕೆ ರಾಯಚೂರು ನಗರ ಮತ್ತು ಗ್ರಾಮಾಂತರ ಪ್ರದೇಶ ವೀಕ್ಷಿಸಿ, 11.30ಕ್ಕೆ ರಸ್ತೆ ಮಾರ್ಗದಲ್ಲಿ ಲಿಂಗಸಗೂರಿಗೆ ತೆರಳಿ ಮಧ್ಯಾಹ್ನ 1 ಗಂಟೆಗೆ ತಾಲ್ಲೂಕಿನ ವಿವಿಧ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ಕೊಡಲಿದೆ.
ಮಧ್ಯಾಹ್ನ 2.30ಕ್ಕೆ ಅಲ್ಲಿಂದ ಹೊರಟು 3.30ಕ್ಕೆ ದೇವದುರ್ಗ ತಲುಪಿ ಅಲ್ಲಿನ ಪರಿಸ್ಥಿತಿ ವೀಕ್ಷಿಸಿ ಸಂಜೆ 4.30ಕ್ಕೆ ಅಲ್ಲಿಂದ ವಡಿಗೇರಾ ರಸ್ತೆ ಮೂಲಕ ರಾಯಚೂರಿಗೆ ತೆರಳಲಿದೆ. ರಾತ್ರಿ 9ಕ್ಕೆ ರಾಯಚೂರು ತಲುಪಿ ಅಲ್ಲಿ ವಾಸ್ತವ್ಯ ಹೂಡಲಿರುವ ತಂಡ ಆ.10ರಂದು ಬೆಳಗ್ಗೆ 9.30ಕ್ಕೆ ರಾಯಚೂರಿನ ಡಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲಿದೆ. ಅಲ್ಲಿಂದ 10.30ಕ್ಕೆ ಹೊರಟು ಮಧ್ಯಾಹ್ನ 1ಕ್ಕೆ ಹುಮ್ನಾಬಾದ್ ತಲುಪಿ ಅಲ್ಲಿ ಸ್ಥಳೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ.