ಬೆಂಗಳೂರು: ರಾಜ್ಯದಲ್ಲಿ ಲಾಕ್ಡೌನ್ ವಿಸ್ತರಣೆ ಕುರಿತು ಕೋವಿಡ್ ತಜ್ಞರ ಸಲಹಾ ಸಮಿತಿ ನೀಡಿರುವ ವರದಿ ಕುರಿತು ಸಚಿವರು ಮತ್ತು ಹಿರಿಯ ಅಧಿಕಾರಿಗಳ ಜೊತೆ ನಾಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಿದ್ದಾರೆ.
ಬುಧವಾರ ಸಂಜೆ 6 ಗಂಟೆಗೆ ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಭೆ ನಡೆಸಲಿದ್ದು, ಕೋವಿಡ್ ಉಸ್ತುವಾರಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಆರ್.ಅಶೋಕ್, ಡಾ.ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ಅನ್ ಲಾಕ್ ಬಗ್ಗೆ ನಾಳಿನ ಸಭೆಯಲ್ಲಿ ನಿರ್ಧಾರವಾಗಲಿದೆ. ಅನ್ಲಾಕ್ ಬಗ್ಗೆ ಸಿಎಂ ಯಡಿಯೂರಪ್ಪ ಒಲವು ಹೊಂದಿದ್ದರೂ ಹಿರಿಯ ಸಚಿವರು ಈಗಲೇ ಬೇಡ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಎಲ್ಲರ ಚರ್ಚೆ ನಡೆಸಿ ನಂತರ ನಿರ್ಧಾರ ಕೈಗೊಳ್ಳಲು ಸಿಎಂ ನಿರ್ಧರಿಸಿದ್ದಾರೆ.
ನಾಳಿನ ಸಭೆಯಲ್ಲಿ ಸಚಿವರು ಅಧಿಕಾರಿಗಳು ಈ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ. ಲಾಕ್ ಡೌನ್ ಮುಂದುವರಿಕೆ, ಹಂತ ಹಂತವಾಗಿ ಅನ್ಲಾಕ್ ಮಾಡುವ ಬಗ್ಗೆ ನಾಳೆಯ ಸಭೆಯಲ್ಲಿ ಚರ್ಚೆ ನಡೆಸಲಿದ್ದಾರೆ.
ಶೇ.5 ಕ್ಕೆ ಪಾಸಿಟಿವಿಟಿ ದರ ಇಳಿಕೆವರೆಗೂ ಲಾಕ್ ಡೌನ್ ಅಗತ್ಯ ಎಂದು ತಜ್ಞರ ಸಲಹಾ ಸಮಿತಿ ವರದಿ ನೀಡಿದೆ. ಕೋವಿಡ್ ಉಸ್ತುವಾರಿ ಸಚಿವರ ಅಭಿಪ್ರಾಯವೂ ಅದೇ ರೀತಿ ಇದೆ. ಆದರೆ 14 ದಿನ ಲಾಕ್ ಡೌನ್ ಬದಲು 7 ದಿನಕ್ಕೆ ವಿಸ್ತರಣೆ ಮಾಡಲು ಸಚಿವರು ಒಲವು ತೋರಿದ್ದಾರೆ. ಸೋಂಕಿತರ ಪ್ರಮಾಣ, ಪಾಸಿಟಿವಿಟಿ ಇಳಿಕೆಯಾಗಿದ್ದರೂ ಕೂಡ ಇನ್ನೂ ಸ್ವಲ್ಪ ದಿನ ಲಾಕ್ ಡೌನ್ ಮುಂದುವರೆಸಿದರೆ ಕೊರೊನಾ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಹಾಗಾಗಿ ಮತ್ತೆ 7 ದಿನದ ವಿಸ್ತರಣೆಗೆ ಸಚಿವರು ಅಭಿಪ್ರಾಯಗಳನ್ನು ನೀಡಿದ್ದಾರೆ. ಈ ಕುರಿತು ಸಿಎಂ ಮತ್ತೊಮ್ಮೆ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.