ಬೆಂಗಳೂರು : ಲಾಕ್ಡೌನ್ ಮೇ 17ಕ್ಕೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕೋವಿಡ್ ಸಂಬಂಧ ಕೈಗೊಳ್ಳಬೇಕಾದ ವಿಷಯ ಸೇರಿದಂತೆ ಇನ್ನು ಹಲವು ವಿಚಾರಗಳ ಕುರಿತು ಚರ್ಚಿಸಲು ನಾಳೆ ಸಂಜೆ ಮಹತ್ವದ ಸಚಿವ ಸಂಪುಟ ಸಭೆ ಕರೆಯಲಾಗಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಳೆ ಸಂಜೆ 4 ಗಂಟೆಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಜೊತೆಗೆ ಮೇ 17 ರಂದು ದೇಶಾದ್ಯಂತ ಲಾಕ್ಡೌನ್ ಅವಧಿ ಕೊನೆಗೊಳ್ಳುತ್ತಿದೆ. ಹಾಗಾಗಿ, ರಾಜ್ಯದಲ್ಲಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಾಳಿನ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದು, ಇದರ ಬಗ್ಗೆಯೂ ಸಭೆಯಲ್ಲಿ ಚರ್ಚೆಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ಪ್ಯಾಕೇಜ್ ಘೋಷಣೆ ಬೆನ್ನಲ್ಲೇ ರಾಜ್ಯದಲ್ಲಿ ಸಿಎಂ ಯಡಿಯೂರಪ್ಪನವರು ಬಡವರಿಗೆ ಮತ್ತೊಂದು ಪ್ಯಾಕೇಜ್ ಘೋಷಣೆ ಮಾಡಲು ಚಿಂತನೆ ನಡೆಸಿದ್ದು, ಇದರ ಬಗ್ಗೆ ನಾಳಿನ ಸಂಪುಟ ಸಭೆಯಲ್ಲಿ ಸಹೋದ್ಯೋಗಿಗಳ ಜೊತೆ ವಿಸ್ತೃತ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಶ್ರಮಿಕರು ಸೇರಿದಂತೆ ವಿವಿಧ ವರ್ಗದವರಿಗೆ 1,610 ಕೋಟಿ ರೂ. ಆರ್ಥಿಕ ನೆರವು ಘೋಷಣೆ ಮಾಡಿದ್ದರು. ಆದರೆ, ಅವರು, ಘೋಷಿಸಿದ ಪ್ಯಾಕೇಜ್ನಲ್ಲಿ ಕೆಲವು ವರ್ಗಗಗಳನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನು ಸರಿದೂಗಿಸುವ ಉದ್ದೇಶದಿಂದ ಯಡಿಯೂರಪ್ಪ ಅವರು, ಅಕ್ಕಸಾಲಿಗರು, ಬಡಗಿಗಳು, ಕುಂಬಾರರು, ಅರ್ಚಕರು, ಟೈಲರ್ಗಳು, ಅಡುಗೆ ಕೆಲಸದವರು ಹಾಗೂ ಹೂ ಮಾರಾಟಗಾರರು ಸೇರಿ ಇತರ ವರ್ಗದವರಿಗೆ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ. ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸಹಾಯ ಮಾಡುವುದು ಇದರ ಉದ್ದೇಶ ಎನ್ನಲಾಗುತ್ತಿದೆ. ಇದರ ಬಗ್ಗೆ ನಾಳಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.