ಬೆಂಗಳೂರು : ನಾಳೆ ಸಂಜೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಿರ್ಧರಿಸಿದ್ದಾರೆ. ಒಂದಿಬ್ಬರನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನಗಳನ್ನ ಖಾಲಿ ಇರಿಸಿಕೊಳ್ಳುವ ಮೂಲಕ ಅತೃಪ್ತರ ಸಮಾಧಾನಕ್ಕೆ ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.
ವರ್ಷದ ನಂತರ ನಾಳೆ ಸಚಿವ ಸಂಪುಟ ವಿಸ್ತರಣೆ ಆಗುತ್ತಿದೆ. ಏಳು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ನಾಳೆ ಸಂಜೆ ನೂತನ ಸಚಿವರ ಪ್ರಮಾಣ ವಚನಕ್ಕೆ ಅವಕಾಶ ಕೋರಿ ರಾಜಭವನಕ್ಕೆ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಸಮ್ಮತಿ ನೀಡಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ಮಾಡುವಂತೆ ರಾಜಭವನದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸಮಯದಲ್ಲಿ ಸ್ವಲ್ಪ ಬದಲಾವಣೆ : ನಾಳೆ ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣ ವಚನಕ್ಕೆ ಸಿಎಂ ನಿರ್ಧರಿಸಿದ್ದರಾದರೂ ರಾಜ್ಯಪಾಲರು 3:50ಕ್ಕೆ ಸಮಯ ನಿಗದಿ ಮಾಡಿದ್ದಾರೆ. 4 ರಿಂದ 4:30ರ ಬದಲು 3:50 ರಿಂದ 4:20ರವರೆಗೆ ಸಮಯ ನಿಗದಿ ಮಾಡಿದ್ದಾರೆ. ಆದರೆ, ಸಮಯ ಬದಲಾವಣೆಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ.
ಎರಡು ಮೂರು ಸ್ಥಾನ ಖಾಲಿ ಉಳಿಸಿಕೊಳ್ಳಲು ಚಿಂತನೆ : ಸಂಪುಟದಲ್ಲಿ ಏಳು ಸ್ಥಾನಗಳು ಖಾಲಿ ಇವೆ. ಈಗ ಏಳು ಸ್ಥಾನಗಳ ಭರ್ತಿಗೆ ಹೈಕಮಾಂಡ್ ಅನುಮತಿ ನೀಡಿದೆ. ಹಾಗಾಗಿ, ನಾಳೆ ಏಳು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ, ಏಳು ಸ್ಥಾನಗಳು ಭರ್ತಿಯಾದಲ್ಲಿ ಸಂಪುಟ ಪೂರ್ಣ ಪ್ರಮಾಣದಲ್ಲಿ ಭರ್ತಿಯಾದಂತಾಗಲಿದೆ.
ಹಾಗಾದಲ್ಲಿ ಅಸಮಾಧಾನಿತರ ಸಮಾಧಾನ ಕಷ್ಟ ಸಾಧ್ಯವಾಗಲಿದ್ದು, ಅತೃಪ್ತಿ ಸ್ಫೋಟಗೊಳ್ಳಲಿದೆ. ಹೀಗಾಗಿ, ಅಸಮಾಧಾನಿತರ ಸಮಾಧಾನಕ್ಕೆ ಸಂಪುಟದಲ್ಲಿ ಎರಡು ಮೂರು ಸ್ಥಾನ ಖಾಲಿ ಉಳಿಸಿಕೊಳ್ಳಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಹಾಲಿ ಇರುವ ಎರಡು ಮೂರು ಸಚಿವರಿಗೆ ಕೊಕ್ ನೀಡಲಿದ್ದಾರೆ ಎಂದು ಹೇಳಲಾಗ್ತಿದೆ.
ಅಬಕಾರಿ ಸಚಿವ ಹೆಚ್.ನಾಗೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎನ್ನುವ ಮಾತು ಕೇಳಿ ಬರುತ್ತಿವೆ. ಆದರೆ, ನಾಗೇಶ್ ಅವರನ್ನು ಈಗ ಸಂಪುಟದಿಂದ ಬಿಡಲು ಮಿತ್ರಮಂಡಳಿ ಒಪ್ಪದೇ ಇದ್ದಲ್ಲಿ ಅವರನ್ನು ಸದ್ಯದ ಮಟ್ಟಿಗೆ ಉಳಿಸಿಕೊಂಡು ಉಳಿದ ಇಬ್ಬರನ್ನು ಸಂಪುಟದಿಂದ ಕೈಬಿಟ್ಟು ಆ ಸ್ಥಾನಗಳನ್ನು ಖಾಲಿ ಉಳಿಸಿಕೊಳ್ಳಲಾಗುತ್ತದೆ ಎನ್ನಲಾಗಿದೆ.
ಸಂಪುಟ ವಿಸ್ತರಣೆ ನಂತರ ಅವಕಾಶ ವಂಚಿತ ಆಕಾಂಕ್ಷಿಗಳ ಅಸಮಾಧಾನ ಸ್ಫೋಟ ಸಹಜವಾಗಿ ಆಗಲಿದ್ದು, ಆಗ ಖಾಲಿ ಸ್ಥಾನ ತೋರಿಸಿ ಅವರನ್ನು ಸಮಾಧಾನ ಪಡಿಸಲು ಸಿಎಂ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: 7 ರಿಂದ 8 ಜನ ಸಂಪುಟಕ್ಕೆ ಸೇರಿಕೊಳ್ಳುತ್ತಿದ್ದಾರೆ, ಅವರಿಗೆಲ್ಲರಿಗೂ ತಿಳಿಸಿದ್ದೇನೆ: ಸಿಎಂ ಬಿಎಸ್ವೈ