ಬೆಂಗಳೂರು : ವಿಧಾನಸಭಾ ಉಪ ಚುನಾವಣೆ ಮತದಾನ ಪೂರ್ಣಗೊಂಡಿದ್ದು, ನಾಳೆ ನಡೆಯುವ ಮತ ಎಣಿಕೆಗೆ ಚುನಾವಣಾ ಆಯೋಗ ಎಲ್ಲಾ ಸಿದ್ಧತೆ ನಡೆಸಿದೆ.
ನಗರ ವ್ಯಾಪ್ತಿಯಲ್ಲಿ ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್ ಹಾಗೂ ಶಿವಾಜಿನಗರ ನಾಲ್ಕು ವಿಧಾನಸಭಾ ಕ್ಷೇತ್ರಗಳಿದ್ದು, ನಾಳೆ ನಡೆಯುವ ಮತ ಎಣಿಕೆಗೆ ಈಗಾಗಲೇ ಚುನಾವಣಾ ಆಯೋಗ ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಪೊಲೀಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.
ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, 8ರಿಂದ 8.30ರವರೆಗೆ ಪೋಸ್ಟಲ್ ಬ್ಯಾಲೆಟ್ ಮತ್ತು ಇ.ಟಿ.ಪಿ.ಬಿ.ಎಸ್ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಬಳಿಕ 8.30ಕ್ಕೆ ಮತ ಎಣಿಕೆ ಪ್ರಾರಂಭವಾಗಲಿದೆ.
ಮತ ಎಣಿಕೆಗೆ ಒಟ್ಟು 63 ಟೇಬಲ್ಗಳನ್ನು ಅಳವಡಿಸಿದ್ದು, 108 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. 128 ಮತ ಎಣಿಕೆ ಸಹಾಯಕರು ಹಾಗೂ 107 ಮೈಕ್ರೋ ಅಬ್ಸರ್ವರ್ಗಳನ್ನು ನೇಮಿಸಲಾಗಿದೆ. ಈ ಮೇಲ್ವಿಚಾರಕರು ಹಾಗೂ ಸಹಾಯಕರಿಗೆ 2 ಹಂತದ ಹಾಗೂ ಮೈಕ್ರೋ ಅಬ್ಸರ್ವರ್ಗಳಿಗೆ ಒಂದು ಹಂತದ ತರಬೇತಿಯನ್ನು ನಿಗದಿಪಡಿಸಲಾಗಿದ್ದು, ಈಗಾಗಲೇ ಒಂದು ಹಂತದ ತರಬೇತಿ ನೀಡಲಾಗಿದೆ.
ಎಣಿಕೆ ಕೇಂದ್ರಗಳ ವಿವರ:
ಕೆ.ಆರ್.ಪುರ: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ, ಬೆಂಗಳೂರು.
ಯಶವಂತಪುರ: ಆರ್.ವಿ.ಇಂಜಿನಿಯರಿಂಗ್ ಕಾಲೇಜ್, ಆರ್.ವಿ.ನಿಕೇತನ್ ಪೋಸ್ಟ್, ಮೈಸೂರ್ ರಸ್ತೆ, ಕೆಂಗೇರಿ, ಬೆಂಗಳೂರು-59.
ಮಹಾಲಕ್ಷ್ಮೀ ಲೇಔಟ್: ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್, ವಿಠ್ಠಲ್ ಮಲ್ಯ ರಸ್ತೆ, ಬೆಂಗಳೂರು.
ಶಿವಾಜಿನಗರ: ಮೌಂಟ್ ಕಾರ್ಮಲ್ ಪಿ.ಯು ಕಾಲೇಜ್, ನಂ-58, ಪ್ಯಾಲೇಸ್ ರಸ್ತೆ, ವಸಂತನಗರ, ಬೆಂಗಳೂರು.