ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಸ್ವಚ್ಛ ಭಾರತ್ ಅಭಿಯಾನದಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ ನಿಗದಿಪಡಿಸಿದ್ದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಹಂಪಮ್ಮ ಎಂಬವರು ಸೇರಿದಂತೆ ಏಳು ಮಂದಿ ಆರೋಪಿಗಳು ತಮ್ಮ ವಿರುದ್ಧದ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಟಿ.ವೆಂಕಟೇಶ್ ನ್ಯಾಯಕ್ ಅವರಿದ್ದ ಕಲಬುರಗಿ ನ್ಯಾಯಪೀಠ ಈ ಆದೇಶ ನೀಡಿದೆ.
ತನಿಖಾಧಿಕಾರಿಗಳು ಅರ್ಜಿದಾರರ ವಿರುದ್ಧ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಈ ಸಂಬಂಧ ಆರೋಪಿಗಳು ಅಕ್ರಮ ನಡೆಸಿದ್ದಾರೆ ಅಥವಾ ಇಲ್ಲವೇ ಎಂಬ ಅಂಶ ತನಿಖಾಧಿಕಾರಿಗಳು ವಿವರಣೆ ನೀಡಿದ್ದಾರೆ. ಈ ಬಗ್ಗೆ ಸಂಪೂರ್ಣ ವಿಚಾರಣೆ ನಡೆಸಬೇಕಾದ ಅಗತ್ಯವಿದೆ. ಅಲ್ಲದೆ, ಅರ್ಜಿದಾರರು ಯಾವುದೇ ತಪ್ಪು ಮಾಡಿಲ್ಲ ಎಂಬುದಾದರೆ, ತಮ್ಮನ್ನು ಪ್ರಕರಣದಿಂದ ಕೈಬಿಡುವಂತೆ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ರಾಯಚೂರು ಜಿಲ್ಲೆಯ ಹೊನ್ನಾಳಿ ಗ್ರಾಮ ಪಂಚಾಯತ್ನ ಹೊನ್ನಾಳಿ, ಗುಡದನಹಳ್ಳಿ ಮತ್ತು ಯಾರಡೋಣ ಗ್ರಾಮಗಳಲ್ಲಿ 2016 ರ ಜುಲೈ 1 ರಿಂದ 2017ರ ಮೇ 17ರವರೆಗಿನ ಅವಧಿಯಲ್ಲಿ 779 ಶೌಚಾಲಯಗಳ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗಿತ್ತು. ಆದರೆ, ಆರೋಪಿಗಳು 531 ಶೌಚಾಲಯಗಳನ್ನು ನಿರ್ಮಾಣ ಮಾಡದೆ 68.19 ಲಕ್ಷ ರೂ.ಗಳ ಅಕ್ರಮ ನಡೆಸಿದ್ದು, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಬಾಬು ರಾಥೋಡ್ ಅವರು ಲಿಂಗಸಗೂರು ಠಾಣೆಗೆ ದೂರು ದಾಖಲಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸ್ ಆಧಿಕಾರಿಗಳು ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯೆ ವಿರುದ್ಧ ಆರೋಪ ಸಂಬಂಧ ಸೂಕ್ತ ತನಿಖೆ ನಡೆಸದೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಅಲ್ಲದೆ, ಶೌಚಾಲಯಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಮ್ಮ ಖಾತೆಗಳಿಗೆ ಹಣ ಬಿಡುಗಡೆ ಮಾಡಿರುವ ಅಂಶವೂ ಗಮನಕ್ಕೆ ಬಂದಿಲ್ಲ. ಅಲ್ಲದೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯತ್ನ ಇತರೆ ಸದಸ್ಯರೊಂದಿಗೆ ಕೈಜೋಡಿಸಿ ತಮ್ಮ ವಿರುದ್ಧ ತಪ್ಪು ದೂರು ದಾಖಲಿಸಿದ್ದಾರೆ. ಹೀಗಾಗಿ ಪ್ರಕರಣ ರದ್ದು ಪಡಿಸಬೇಕು ಎಂದು ಮನವಿ ಮಾಡಿದ್ದರು. ಸರ್ಕಾರದ ಪ್ರರ ವಕೀಲರು ವಾದ ಮಂಡಿಸಿ, ಮೇಲ್ನೋಟಕ್ಕೆ ಅರ್ಜಿದಾರರು ಅಕ್ರಮ ನಡೆಸಿರುವುದನ್ನು ಪುಷ್ಠೀಕರಿಸಲು ಸಾಕ್ಷ್ಯಾಧಾರಗಳಿವೆ. ಅವರು ಮಾಡಿರುವ ಕೃತ್ಯದಿಂದ ಸರ್ಕಾರಕ್ಕೆ 68.19 ಲಕ್ಷ ರೂ ನಷ್ಟವಾಗಿದೆ. ಹೀಗಾಗಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು.
ಇದನ್ನೂ ಓದಿ: ಅಕ್ರಮ ಜಾಹೀರಾತುದಾರರ ವಿರುದ್ಧ 264 ಎಫ್ಐಆರ್: ಹೈಕೋರ್ಟ್ಗೆ ಮಾಹಿತಿ ನೀಡಿದ ಬಿಬಿಎಂಪಿ