ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಇಂದು ಮಧ್ಯಾಹ್ನ 1.30ರ ಒಳಗೆ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಹೀಗಾಗಿ ಸಿಎಂಗೆ ಹಿನ್ನೆಡೆಯಾಗಲಿದ್ದು, ಇವತ್ತೆ ಭ್ರಷ್ಟ ಸರ್ಕಾರಕ್ಕೆ ಕೊನೆ ದಿನವಾಗುತ್ತೆ, ಶುಕ್ರವಾರ ಬಿಜೆಪಿಗೆ ಮಂಗಳವಾದ ದಿನವಾಗಲಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ಬಳಿಕ ನಗರದ ಶಿವಾನಂದ ಸರ್ಕಲ್ವರೆಗೆ ವಾಕಿಂಗ್ ಮಾಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ರೈತರ ಸಾಲಮನ್ನಾದ ಸುಳ್ಳು ಭರವಸೆಗೆ ಕೊನೆ ದಿನವಾಗುತ್ತೆ. ನಿನ್ನೆ ಮೈತ್ರಿ ಸರ್ಕಾರದ ನಾಯಕರು ವ್ಯವಸ್ಥಿತವಾಗಿಯೇ ಸಿದ್ಧರಾಗಿ ಬಂದು ಕಾಲಹರಣ ಮಾಡಿದ್ದರು. ಈ ವೇಳೆ ಬಿಜೆಪಿಯವರನ್ನು ಕೆರಳಿಸುವ ಯತ್ನ ಮಾಡಿದ್ದಾರೆ. ರಾಜ್ಯಪಾಲರು ಸಿಎಂಗೆ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡಿರುವ ಕಾರಣ ಜೆಡಿಎಸ್ನಿಂದ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಆದರೆ ಒಂದು ವೇಳೆ ಮೈತ್ರಿ ಸುಪ್ರೀಂ ಮೊರೆ ಹೋದ್ರೆ, ಸುಪ್ರೀಂನಿಂದ ಛೀಮಾರಿ ಅನುಭವಿಸಬೇಕಾಗುತ್ತದೆ ಎಂದರು.
ರಾಜ್ಯದ ವಿದ್ಯಮಾನಗಳ ಬಗ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮಾಹಿತಿ ನೀಡುತ್ತೇವೆ. ಬಿಜೆಪಿಯಲ್ಲಿ 105 ಶಾಸಕರಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರ ಸಂಖ್ಯೆ 98ಕ್ಕೆ ಇಳಿದಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಸರ್ಕಾರದ ಕೊನೆ ದಿನ ಇವತ್ತು. ಹೀಗಾಗಿ ನಮ್ಮ ಮೇಲೆ ಬಹಳಷ್ಟು ಜವಾಬ್ದಾರಿ ಇದೆ. ನಮಗೆ ಸಂಪೂರ್ಣ ವಿಶ್ವಾಸ ಇದೆ ಎಂದರು.
ಇನ್ನು ನಿನ್ನೆ ವಿಧಾನಸೌಧದಲ್ಲಿ ರಾಜಕೀಯ ದೊಂಬರಾಟ ನಡೆದಿತ್ತು. ಅದಕ್ಕೆ ತಾಳ ಹಾಕುವಂತಹ ಕೆಲಸ ಸ್ಪೀಕರ್ ಮಾಡಿದ್ದಾರೆ. ಯಾರೇ ಆದರೂ ಶಾಸಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ, ಸ್ಪೀಕರ್ ನಡೆಯನ್ನು ಟೀಕೆ ಮಾಡೋದಕ್ಕೆ ಹೋಗಲ್ಲ. ನಾವು ಇವತ್ತು ಶಾಂತವಾಗಿ ಸಿಎಂರ ವಿದಾಯ ಭಾಷಣ ಕೇಳುತ್ತೇವೆ. ಇನ್ನು ಶ್ರೀಮಂತ ಪಾಟೀಲರನ್ನು ಕಿಡ್ನಾಪ್ ಮಾಡಿದ್ದಾರೆ ಎಂಬ ಆರೋಪ ಸುಳ್ಳು ಎಂದು ಬಿಎಸ್ವೈ ಹೇಳಿದರು.