ಬೆಂಗಳೂರು : ವಿಧಾನ ಪರಿಷತ್ ಉಪಸಭಾಪತಿ ಚುನಾವಣೆ ಹಾಗೂ ಸಭಾಪತಿ ಆಯ್ಕೆ ಸಂಬಂಧ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರವಾಗಿ ಇಂದು ರಾತ್ರಿ ಜೆಡಿಎಸ್ ವರಿಷ್ಠರು ಮಹತ್ವದ ಸಭೆ ಕರೆದಿದ್ದಾರೆ.
ಓದಿ: ರೈತ ವಿರೋಧಿ ಕಾಯ್ದೆ ಹಿಂಪಡೆಯಲು ಮೋದಿಗೆ ಪ್ರತಿಷ್ಠೆ ಅಡ್ಡಿ : ಸಿದ್ದರಾಮಯ್ಯ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ವಿಧಾನ ಪರಿಷತ್ ಸಭಾಪತಿ ಸ್ಥಾನವನ್ನು ಬಿಟ್ಟುಕೊಡುವಂತೆ ಜೆಡಿಎಸ್ ಈಗಾಗಲೇ ಬಿಜೆಪಿ ಮುಂದೆ ಬೇಡಿಕೆ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.
ವಿಧಾನ ಪರಿಷತ್‍ನ ಉಪಸಭಾಪತಿ ಸ್ಥಾನದ ಚುನಾವಣೆಗೆ ಈಗಾಗಲೇ ವೇಳಾಪಟ್ಟಿ ಪ್ರಕಟವಾಗಿದೆ. ಆ ಸ್ಥಾನಕ್ಕೆ ಸ್ಪರ್ಧೆ ಮಾಡದಿರಲು ಜೆಡಿಎಸ್ ನಿರ್ಧರಿಸಿದೆ. ಬಿಜೆಪಿಗೆ ಉಪಸಭಾಪತಿ ಸ್ಥಾನವನ್ನು ಬಿಟ್ಟುಕೊಟ್ಟು ಸಭಾಪತಿ ಸ್ಥಾನವನ್ನು ಪಡೆದುಕೊಳ್ಳುವುದು ಜೆಡಿಎಸ್ನ ಲೆಕ್ಕಾಚಾರ.
ಸಭಾಪತಿ ಕೆ.ಪ್ರತಾಪ್ ಚಂದ್ರಶೆಟ್ಟಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿ ಬಂದಿರುವ ಹಿನ್ನೆಲೆ, ತೆರವಾಗುವ ಸಭಾಪತಿ ಸ್ಥಾನವನ್ನು ತಮಗೆ ಬಿಟ್ಟು ಕೊಡುವಂತೆ ಬಿಜೆಪಿಯನ್ನು ಜೆಡಿಎಸ್ ಕೋರಿದೆ.
ನಿನ್ನೆ ರಾತ್ರಿ ದೇವೇಗೌಡರ ಸಮಕ್ಷಮದಲ್ಲಿ ನಡೆದ ವಿಧಾನ ಪರಿಷತ್ ಸದಸ್ಯರ ಸಭೆಯಲ್ಲಿ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನದ ಅಭ್ಯರ್ಥಿಯನ್ನಾಗಿ ತೀರ್ಮಾನಿಸಲಾಗಿದೆ. ಬಿಜೆಪಿಯ ರಾಷ್ಟ್ರೀಯ ಮತ್ತು ರಾಜ್ಯ ನಾಯಕರೊಂದಿಗೆ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆ ಸಂಬಂಧ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.
ಈ ಸಂಬಂಧ ಸಿಎಂ ಯಡಿಯೂರಪ್ಪ ಅವರನ್ನು ಇಂದು ಬೆಳಗ್ಗೆ ಭೇಟಿ ಮಾಡಿದ ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರು ಮಾತುಕತೆ ನಡೆಸಿ ತಮ್ಮ ಪಕ್ಷದ ನಿಲುವನ್ನು ತಿಳಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ನಾಯಕರ ಸಂದೇಶಕ್ಕಾಗಿ ಕಾಯುತ್ತಿರುವ ಜೆಡಿಎಸ್ ವರಿಷ್ಠರು ಇಂದು ರಾತ್ರಿ ಮತ್ತೊಂದು ಸುತ್ತಿನ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.