ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮಹತ್ವಾಕಾಂಕ್ಷೆಯ ಸಚಿವ ಸಂಪುಟ ಸಭೆ ಇಂದು ವಿಧಾನಸೌಧದಲ್ಲಿ ನಡೆಯಲಿದ್ದು ಬರ, ವಿವಿಧ ಕ್ಷೇತ್ರಗಳಿಗೆ ಅನುದಾನ ಹಾಗೂ ಮೂಲಭೂತ ಸೌಕರ್ಯ ಪೂರೈಕೆಗೆ ತುರ್ತಾಗಿ ಕೈಗೊಳ್ಳಬಹುದಾದ ನಿರ್ಧಾರಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ.
ವಿವಿಧ ಇಲಾಖೆಗಳ ಒಟ್ಟು 52 ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಹೆಚ್ಚಿನವುಗಳು ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅನೇಕ ಯೋಜನೆಗಳಿಗೆ ಅನುದಾನ ಬಿಡುಗಡೆ ಆಗಿರಲಿಲ್ಲ. ಪ್ರಮುಖವಾಗಿ ಈ ವಿಚಾರಗಳ ಮೇಲೆ ಚರ್ಚೆ ನಡೆದು ಅನುದಾನ ಬಿಡುಗಡೆಗೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಬೆಂಗಳೂರು ನಗರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು ಅನುದಾನ ಬಿಡುಗಡೆಯಾಗಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದು, ಸಿಎಂ ವಿರುದ್ಧ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಈ ಹಿನ್ನೆಲೆ ಇವರ ಅನುದಾನ ಬಿಡುಗಡೆ ಸಂಬಂಧ ಕೂಡ ಚರ್ಚೆ ನಡೆಯುವ ಸಾಧ್ಯತೆ ಇದೆ.
ಏನೇನು ವಿಚಾರ:
ಕೃಷಿ ಇಲಾಖೆಯಲ್ಲಿ ಹೆಚ್ಚಿನ ವಿಚಾರಗಳಿಲ್ಲ. ಆದರೆ ಉಡುಪಿ ಸಹಾಯಕ ಕೃಷಿ ನಿರ್ದೇಶಕ ಜಿ. ಬಸವರಾಜು ಅವರನ್ನು ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವ ವಿಚಾರ ಅನುಮೋದನೆ ಪಡೆಯಲಿದೆ. ಉಳಿದಂತೆ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆ ಭಟ್ಕಳದ ಮೀನುಗಾರಿಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ದುರ್ನಡತೆ ಸಂಬಂಧ ಉಪಲೋಕಾಯುಕ್ತರು ಸಲ್ಲಿಸಿರುವ ದಂಡನೆಯ ಶಿಫಾರಸು ತಿರಸ್ಕರಿಸುವ ನಿರ್ಧಾರ ಕೈಗೊಳ್ಳಲಾಗುತ್ತದೆ. ಇನ್ನು ವಾಣಿಜ್ಯ ಕೈಗಾರಿಕೆ ಇಲಾಖೆ ಉಪನಿರ್ದೇಶಕ ಎಸ್. ಸುರೇಶ್ ಪರ ತೀರ್ಪು ಬಂದ ಹಿನ್ನೆಲೆ ಸರ್ಕಾರಿ ಸೇವೆಗೆ ಪುನರ್ ಸ್ಥಾಪಿಸುವುದು, ರಾಜ್ಯ ಹೈಕೋರ್ಟ್ ಆಡಳಿತಾತ್ಮಕ ವೆಚ್ಚಗಳ ನಿಯಮ 2019ನ್ನು ಅನುಮೋದನೆ, ಲೋಕಾಯುಕ್ತ ತಿದ್ದುಪಡಿ ವಿಧೇಯಕ 2019 ಅನುಮೋದನೆ, ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ವಿಧೇಯಕ 2019 ಅನುಮೋದನೆ, ಸರ್ಕಾರದ ಸಚಿವಾಲಯ ಸೇವೆಗಳ ನಿಯಮ ಸಮಗ್ರ ಪರಿಷ್ಕರಣೆ ಕುರಿತು, ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ಹಾಗೂ (ಪರಿವೀಕ್ಷಣಾ) ನಿಯಮಗಳಿಗೆ ತಿದ್ದುಪಡಿ ಸೇರಿದಂತೆ 22 ವಿಚಾರಗಳ ಮೇಲೆ ಚರ್ಚೆ ನಡೆಯಲಿದೆ. ಇದಲ್ಲದೇ ಶಿಕ್ಷಣ ಇಲಾಖೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ, ಉನ್ನತ ಶಿಕ್ಷಣ, ಪರಿಸರ ಮತ್ತು ಜೀವಿ ಪರಿಸ್ಥಿತಿ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು, ಒಳಾಡಳಿತ, ಆರೋಗ್ಯ, ತೋಟಗಾರಿಕೆ, ಸಣ್ಣನೀರಾವರಿ, ಕಂದಾಯ, ಮುಜರಾಯಿ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 52 ವಿಚಾರಗಳು ಚರ್ಚೆಗೆ ಬರಲಿವೆ.