ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಶುಕ್ರವಾರ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನ ಭೇಟಿಯಾಗಲಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಭೇಟಿಗೆ ಅವಕಾಶ ಸಿಕ್ಕಿದ್ದು, ಪಕ್ಷದ ರಾಜ್ಯ ನಾಯಕರ ಜೊತೆ ರಾಜಭವನಕ್ಕೆ ತೆರಳುವ ಡಿಕೆ ಶಿವಕುಮಾರ್, ರಾಜ್ಯದ ವಿವಿಧ ವಿಚಾರಗಳು ಹಾಗೂ ಬೆಳವಣಿಗೆಗಳ ಕುರಿತು ರಾಜ್ಯಪಾಲರಿಗೆ ಮಾಹಿತಿ ಒದಗಿಸಿ ಚರ್ಚೆ ನಡೆಸಲಿದ್ದಾರೆ.
ಅತ್ಯಂತ ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳ ನಿಧಿಗೆ ಪಕ್ಷದ ಕೊಡುಗೆಯನ್ನು ಸೇರಿಸಿ ಒಟ್ಟು 100 ಕೋಟಿ ರೂಪಾಯಿ ಮೊತ್ತದ ಧನ ಸಂಗ್ರಹ ಮಾಡಿ, ಅದರಿಂದ ಲಸಿಕೆ ಖರೀದಿ ಮಾಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಆದರೆ ಲಸಿಕೆ ಖರೀದಿಗೆ ರಾಜ್ಯ ಸರ್ಕಾರದಿಂದ ಇದುವರೆಗೂ ಪರವಾನಗಿ ಸಿಕ್ಕಿಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಪಕ್ಷದ ಹಲವು ನಾಯಕರು ಮನವಿ ಮಾಡಿದ್ದಾರೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದು ಈ ವಿಚಾರವನ್ನು ಗಮನಸೆಳೆದಿದ್ದಾರೆ. ಆದರೆ ಸಿಎಂ ಅಥವಾ ಸರ್ಕಾರದಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಒಂದಿಷ್ಟು ಲಸಿಕೆ ಖರೀದಿಸಿ ಬಡ ಜನರಿಗೆ ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ತಮ್ಮ ಉದಾತ್ತ ಕಾರ್ಯಕ್ಕೆ ಸರ್ಕಾರದಿಂದ ಬೆಂಬಲ ಸಿಗುತ್ತಿಲ್ಲ. ಹೀಗಾಗಿ ತಾವೇ ಮಧ್ಯಪ್ರವೇಶ ಮಾಡಿ ನಮಗೆ ಅವಕಾಶ ದೊರಕಿಸಿಕೊಡಬೇಕು ಎಂದು ರಾಜ್ಯಪಾಲರ ಬಳಿ ಡಿಕೆ ಶಿವಕುಮಾರ್ ಮನವಿ ಮಾಡಲಿದ್ದಾರೆ.
ಇದಲ್ಲದೇ ರಾಜ್ಯ ಸರ್ಕಾರ ಕೋವಿಡ್ ಮೊದಲ ಹಾಗೂ ಎರಡನೇ ಅಲೆಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಪ್ರತಿಪಕ್ಷಗಳು ನೀಡಿದ ಸಲಹೆಯನ್ನು ಸಹ ಪರಿಗಣಿಸುತ್ತಿಲ್ಲ. ಜವಾಬ್ದಾರಿಯುತ ಸ್ಥಾನದಲ್ಲಿರುವ ತಾವು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕು. ಆಮ್ಲಜನಕದ ಕೊರತೆಯಿಂದಾಗಿ ಸಾಕಷ್ಟು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ. ಲಸಿಕೆ ಸಹ ಸಮರ್ಪಕವಾಗಿ ಸಿಗುತ್ತಿಲ್ಲ. ರಾಜ್ಯ ಸರ್ಕಾರದ ನಿರ್ಲಕ್ಷ್ಯಕ್ಕೆ ಸಾಮಾನ್ಯ ಹಾಗೂ ಅಮಾಯಕ ನಾಗರಿಕರು ಬಲಿಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ತಾವು ಮಧ್ಯಪ್ರವೇಶಿಸುವುದು ಅನಿವಾರ್ಯ ಎಂದು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಡಲಿದ್ದಾರೆ.
ಇದನ್ನು ಓದಿ: ಪಕ್ಷದ ಅಧ್ಯಕ್ಷನಾಗಿ ಬೇಲ್ಗೆ ಅರ್ಜಿ ಹಾಕಿದೆ,ಆದ್ರೆ ಸಿಕ್ಕಿಲ್ಲಾ: ಡಿ.ಕೆ. ಶಿವಕುಮಾರ್