ಬೆಂಗಳೂರು: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಲಕ್ನೋ ಸಿಬಿಐ ವಿಶೇಷ ನ್ಯಾಯಾಲದಿಂದ ಇಂದು ತೀರ್ಪು ಹೊರಬೀಳಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರಿನಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.
ಅಹಿತಕರ ಘಟನೆ ನಡೆಯದಂತೆ ನಗರದೆಲ್ಲೆಡೆ ಪೊಲೀಸರು ಕಟ್ಟೆಚ್ಚರ ವಹಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಸದರಿ ಪ್ರಕರಣದಲ್ಲಿ ತೀರ್ಪು ಆರೋಪಿತಗಳ ಪರವಾಗಿ ಬಂದಲ್ಲಿ ಹಲವು ಕಡೆಗಳಲ್ಲಿ ಸಂಭ್ರಮಾಚರಣೆ, ಮೆರವಣಿಗೆ ಏರ್ಪಡಿಸುವುದು ಹಾಗೂ ವಿರುದ್ಧವಾಗಿ ಬಂದರೆ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪೊಲೀಸರು ನಗರದಲ್ಲಿ ಕಟ್ಟೆಚ್ಚರ ವಹಿಸಿದ್ದಾರೆ.
ಸಂವಿಧಾನ ತಿದ್ದುಪಡಿ ಕಾಯ್ದೆ, ತ್ರಿವಳಿ ತಲಾಖ್ ಕಾಯ್ದೆ ಜಾರಿ ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ಹಲವಾರು ಪ್ರತಿಭಟನೆ ಈಗಾಗಲೇ ನಡೆದಿವೆ. ಕೋವಿಡ್-19 ಹರಡುವಿಕೆಯಲ್ಲಿ ಒಂದು ಸಮುದಾಯದವರನ್ನು ಗುರಿಯಾಗಿಸಿದ ಬಗ್ಗೆ ಹಾಗೂ ಇತ್ತೀಚೆಗೆ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗಳಲ್ಲಿ ನಡೆದ ಪ್ರಕರಣಗಳ ಹಿನ್ನೆಲೆ ಸೂಕ್ತ ನಿಗಾವಹಿಸಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪೊಲೀಸರು ತೆಗೆದುಕೊಳ್ಳುತ್ತಿದ್ದಾರೆ.