ಬೆಂಗಳೂರು : ಜೂನ್ 10ರಂದು ನಡೆಯಲಿರುವ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆ ಮೂಲಕ ಜೆಡಿಎಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ವಿಧಾನಸಭೆಯಲ್ಲಿ 69 ಶಾಸಕ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಒಬ್ಬ ಅಭ್ಯರ್ಥಿಯನ್ನು ರಾಜ್ಯಸಭೆಗೆ ಕಳಿಸಲು ಶಕ್ತವಾಗಿದೆಯಾದರೂ ಇವತ್ತು ಜೈರಾಮ್ ರಮೇಶ್ ಹಾಗೂ ಮನ್ಸೂರ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಿ ಹೊಸ ರಣತಂತ್ರ ಹೆಣೆದಿದೆ.
ಇರುವ ಶಾಸಕ ಬಲದಲ್ಲಿ 45 ಮತಗಳು ಮೊದಲ ಅಭ್ಯರ್ಥಿ ಜೈರಾಮ್ ರಮೇಶ್ ಅವರ ಗೆಲುವಿಗೆ ಸಾಕಾಗುತ್ತವಾದರೆ, ಉಳಿದಂತೆ 24 ಮತಗಳು ಅದರ ಬಳಿ ಹೆಚ್ಚುವರಿಯಾಗಿ ಉಳಿಯುತ್ತವೆ. ಈ ಮತಗಳಿಂದ ಅದರ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಗೆಲ್ಲಲು ಸಾಧ್ಯವೇ ಇಲ್ಲವಾದರೂ, ಅವರನ್ನು ಉದ್ದೇಶಪೂರ್ವಕವಾಗಿ ಕಣಕ್ಕಿಳಿಸಲಾಗಿದೆ. ಮೊದಲನೆಯದಾಗಿ, ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಲು ತನಗೆ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದೆ.
ಜೊತೆಗೆ ಜೆಡಿಎಸ್ ಪಕ್ಷ ತನಗಿರುವ 32 ಮತಗಳ ಬೆಂಬಲದೊಂದಿಗೆ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೂ, ಅದು ಗೆಲುವಿಗೆ ಕಾಂಗ್ರೆಸ್ ಇಲ್ಲವೇ ಬಿಜೆಪಿಯ ಹೆಚ್ಚುವರಿ ಮತಗಳನ್ನು ಪಡೆಯಬೇಕಾದ ಅನಿವಾರ್ಯತೆ ಇದೆ. ಆದರೆ, ಈಗ ಇಂತಹ ಸಾಧ್ಯತೆಗಳಿಗೆ ಕಾಂಗ್ರೆಸ್ ಪಕ್ಷ ಬ್ರೇಕ್ ಹಾಕಿದ್ದು, ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸಲು ಸಾಧ್ಯವೇ ಇಲ್ಲ ಎಂಬ ಸಂದೇಶ ರವಾನಿಸಿದೆ.
ಹೀಗಾಗಿ, ತನ್ನ ಅಭ್ಯರ್ಥಿಯ ಗೆಲುವಿಗಾಗಿ ಜೆಡಿಎಸ್ ಪಕ್ಷ ಒಂದೋ ಬಿಜೆಪಿಯ ಮೊರೆ ಹೋಗಬೇಕು. ಆದರೆ, ಇದೀಗ ಬಿಜೆಪಿ ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದೆ. ಈಗ ಜೆಡಿಎಸ್ ಮತ್ತಷ್ಟು ಒತ್ತಡಕ್ಕೆ ಸಿಲುಕಿಕೊಂಡಿದೆ. ಒಂದು ವೇಳೆ ಅದು ತನ್ನ ಗೆಲುವಿಗಾಗಿ ಬಿಜೆಪಿಯ ಬೆಂಬಲ ಪಡೆದರೂ ಅಥವಾ ತಾನು ಸ್ಪರ್ದಿಸದೆ ಬಿಜೆಪಿಯ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸಿದರೂ ಕಾಂಗ್ರೆಸ್ ಪಕ್ಷದ ರಣತಂತ್ರ ಯಶಸ್ವಿಯಾಗುತ್ತದೆ.
ಜೆಡಿಎಸ್ ಪಕ್ಷ ಕೋಮುವಾದಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರೆ, ಅದು ಬಿಜೆಪಿಯ ಬಿ ಟೀಮ್ ಎಂದು ರಾಜ್ಯದ ಜನರ ಮುಂದೆ ಹೇಳಲು ಕೈ ಪಾಳೆಯಕ್ಕೆ ಅನುಕೂಲವಾಗುತ್ತದೆ. ಹೀಗೆ ಜೆಡಿಎಸ್ ಪಕ್ಷಕ್ಕೂ, ಬಿಜೆಪಿಗೂ ಸಂಬಂಧವಿದೆ ಎಂಬುದನ್ನು ಜಾಹೀರು ಮಾಡಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳನ್ನು ಕ್ರೋಢೀಕರಿಸಬಹುದು ಎಂಬುದು ಕಾಂಗ್ರೆಸ್ ಲೆಕ್ಕಾಚಾರ.
ಉನ್ನತ ಮೂಲಗಳ ಪ್ರಕಾರ,ಪಕ್ಷಕ್ಕೆ ಒಂದು ಸೀಟು ಗೆಲ್ಲಲು ಸಾಧ್ಯವಾಗುತ್ತದಾದರೂ,ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಎಂದು ವರಿಷ್ಠರ ಮೇಲೆ ಒತ್ತಡ ಹೇರಿದವರು ಸಿದ್ಧರಾಮಯ್ಯ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಪಕ್ಷದ ಜಾತ್ಯಾತೀತ ನೀತಿಯ ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯೋಣ.
ಒಂದು ವೇಳೆ ಇದು ಯಶಸ್ವಿಯಾದರೆ ಬಿಜೆಪಿ ವಿರೋಧಿ ಮತಗಳು ಕ್ರೋಢೀಕರಣಗೊಂಡು ಕಾಂಗ್ರೆಸ್ ಪಕ್ಷದ ಹಿಂದಿರುವ ಮತ ಬ್ಯಾಂಕ್ ಗಟ್ಟಿಯಾಗಿ ಉಳಿಯುತ್ತದೆ ಎಂದು ಸಿದ್ಧರಾಮಯ್ಯ ವರಿಷ್ಠರಿಗೆ ವಿವರಿಸಿದ್ದಾರೆನ್ನಲಾಗುತ್ತಿದೆ. ಈ ಮಧ್ಯೆ ಬಿಜೆಪಿ ಪಾಳೆಯದಲ್ಲಿ ವಿಭಿನ್ನ ಚರ್ಚೆಗಳು ನಡೆಯುತ್ತಿದ್ದು ತಮಗಿರುವ ಶಾಸಕ ಬಲದಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಅವರನ್ನು ಗೆಲ್ಲಿಸಿ ರಾಜ್ಯಸಭೆಗೆ ಕಳಿಸಿದರೂ,ಇನ್ನೂ ಹೆಚ್ಚುವರಿಯಾಗಿ 32 ಮತಗಳು ಉಳಿಯುತ್ತವೆ.
ಈ 32 ಮತಗಳ ಜೊತೆ, 90 ದ್ವಿತೀಯ ಪ್ರಾಶಸ್ತ್ಯದ ಮತಗಳನ್ನು ಮೂರನೇ ಅಭ್ಯರ್ಥಿಗೆ ನೀಡಿದರೆ ಅವರು ದಡ ಸೇರುತ್ತಾರೆ.ಯಾಕೆಂದರೆ ಜೆಡಿಎಸ್ ಪಕ್ಷದ ಬಳಿಯೂ ಒಟ್ಟು 32 ಮತಗಳಿದ್ದು,ಅದು ತನ್ನ ಬಲವನ್ನು ನೆಚ್ಚಿಕೊಂಡು ಗೆಲ್ಲುವ ಸ್ಥಿತಿಯಲ್ಲಿಲ್ಲ. ಹೀಗಾಗಿ ತನ್ನ ಶಕ್ತಿಯಿಂದಲೇ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು ಎಂದು ಬಿಜೆಪಿ ಯೋಚಿಸಿದ್ದು ಈ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ತೀವ್ರ ಕುತೂಹಲವನ್ನುಂಟು ಮಾಡಿದೆ.
ಉನ್ನತ ಮೂಲಗಳ ಪ್ರಕಾರ ಇಂತಹ ಲೆಕ್ಕಾಚಾರಗಳ ನಡುವೆ ಜೆಡಿಎಸ್ ಅಭ್ಯರ್ಥಿ ಯಾರ ಮತಗಳನ್ನು ಗಳಿಸಲು ಯಶಸ್ವಿಯಾಗದೆ ವಿಫಲರಾಗಿ ಸೋಲನುಭವಿಸಿದರೂ ಅದಕ್ಕೆ ಪಾಠ ಕಲಿಸಿದಂತೆ ಎಂಬುದು ಸಿದ್ಧರಾಮಯ್ಯ ಲೆಕ್ಕಾಚಾರವೆನ್ನಲಾಗಿದೆ. ರಾಜ್ಯಸಭಾ ಚುನಾವಣೆ ಅಭ್ಯರ್ಥಿ ವಿಷಯದ ಬಗ್ಗೆ ಚರ್ಚೆ ಮಾಡಲು ವಿಧಾನಸೌಧದಲ್ಲಿ ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ಜೆಡಿಎಸ್ ಉಪ ನಾಯಕ, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಅಭ್ಯರ್ಥಿ ಕಣಕ್ಕಿಳಿಸುವ ಹಾಗೂ ಬಿಜೆಪಿ ಅಥವಾ ಕಾಂಗ್ರೆಸ್ ನಿಂದ ಮತ ಪಡೆಯುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ಓದಿ : ಮಾದಕ ವಸ್ತು ಸರಬರಾಜು: ಸಿಸಿಬಿ ಬಲೆಗೆ ಬಿದ್ದ ನೈಜೀರಿಯಾ ಮೂಲದ ಡ್ರಗ್ ಪೆಡ್ಲರ್