ಬೆಂಗಳೂರು: ಲಾರಿ ಟ್ಯಾಂಕರ್‌ನಲ್ಲಿ ಅಕ್ರಮವಾಗಿ ಡೀಸೆಲ್ ಸಾಗಣೆ ಮಾಡುವದನ್ನು ಪತ್ತೆ ಹಚ್ಚುವ ದಾಳಿಯಲ್ಲಿ ಪೊಲೀಸ್ ಇಲಾಖೆ ಡಿವೈಎಸ್ಪಿ ಅಥವಾ ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳು ಇರಬೇಕು ಎಂದು ಹೈಕೋರ್ಟ್ ಸೂಚಿಸಿದ್ದು, ಇದಕ್ಕೆ ಸಂಬಂಧಿಸಿದ ಲಾರಿ ಮಾಲೀಕರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಸಾದಿಕ್ ಪಾಷ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ ಅಂತಿಮವಾಗಿ ಅರ್ಜಿದಾರರ ಪರ ವಾದಾಂಶವನ್ನು ಮಾನ್ಯ ಮಾಡಿದ ನ್ಯಾಯಪೀಠ ಐಪಿಸಿ ಕಲಂಗಳ ಅಡಿಯಲ್ಲಿ ದಾಖಲಿಸಿರುವ ಅಪರಾಧ ಇಲ್ಲಿ ಅನ್ವಯ ಆಗುವುದಿಲ್ಲ. ಅಂತೆಯೇ, ಮೋಟಾರು ಸ್ಪಿರಿಟ್ ಮತ್ತು ಹೈ–ಸ್ಪೀಡ್ ಡೀಸೆಲ್ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಈ ಪ್ರಕರಣದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗೆ ದಾಳಿ, ತಪಾಸಣೆ ಮತ್ತು ಜಪ್ತಿ ಮಾಡುವ ಅಧಿಕಾರ ಇರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಸ್ ಸುನಿಲ್ ಕುಮಾರ್, ಈ ಪ್ರಕರಣದಲ್ಲಿ ದಾಳಿ ನಡೆಸಿ ಲಾರಿ ಮತ್ತು ಡೀಸೆಲ್ ಅನ್ನು ವಶಪಡಿಸಿಕೊಂಡಿರುವ ಅಧಿಕಾರಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಶ್ರೇಣಿಯಲ್ಲಿದ್ದು ಇದು ಕಾನೂನಿಗೆ ವಿರುದ್ಧವಾದ ನಡೆ. ಹೀಗಾಗಿ, ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿದ್ದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಪ್ರಕರಣದ ಹಿನ್ನೆಲೆ ಏನು ? ಮುದಗಲ್–ಚಿತ್ತೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಕಾನೂನು ಬಾಹಿರವಾಗಿ ಲಾರಿಯ ಟ್ಯಾಂಕರ್‌ನಲ್ಲಿ ಡೀಸೆಲ್ ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಧರಿಸಿ ಪೊಲೀಸರು 2022ರ ಸೆಪ್ಟೆಂಬರ್ 15ರಂದು ದಾಳಿ ನಡೆಸಿದ್ದರು. ಸ್ಥಳದಲ್ಲೇ ಲಾರಿಯನ್ನು ಜಪ್ತಿ ಮಾಡಿ ಚಾಲಕ ಮತ್ತು ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆ–1860ರ ಕಲಂ 285, ಅಗತ್ಯ ವಸ್ತುಗಳ ಕಾಯ್ದೆ–1955 ಹಾಗೂ ಮೋಟಾರು ಸ್ಪಿರಿಟ್ ಮತ್ತು ಹೈ–ಸ್ಪೀಡ್ ಡೀಸೆಲ್ ಸಾಗಣೆ, ನಿಯಂತ್ರಣ ವಿತರಣೆ ಮತ್ತು ಅಕ್ರಮ ತಡೆ ಆದೇಶ–1988ರ ಉಪನಿಯಮಗಳ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿತು.
ಲಾರಿಯ ಮಾಲೀಕ ಸಾದಿಕ್ ಪಾಷ ಮುಳಬಾಗಿಲಿನಲ್ಲಿ ಎಸ್‌ಡಬ್ಲ್ಯುಎಸ್ & ಸನ್ಸ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಹೊಂದಿದ್ದು, ನಾನು ಡೀಸೆಲ್ ಸಾಗಣೆ ಪರವಾನಗಿ ಹೊಂದಿರುವೆ. ನನ್ನ ವಿರುದ್ಧ ಹೂಡಲಾಗಿರುವ ಪ್ರಕರಣ ಕಾನೂನು ಬಾಹಿರವಾಗಿದೆ ಎಂದು ಪ್ರತಿಪಾದಿಸಿದ್ದರು. ಅಂತ ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಸಿಬಿಎಸ್ಸಿ, ಸಿಐಎಸ್‌ಸಿಇ ಪಠ್ಯಕ್ರಮಕ್ಕೆ ಕನ್ನಡ ಕಡ್ಡಾಯ ಕಾನೂನು: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್