ಬೆಂಗಳೂರು: ಜೆಡಿಎಸ್ ಪಕ್ಷ ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿಮುಗಿಸುವ ಸಂಚು ನಡೆದಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಎಲ್ಲರೂ ಸೇರಿಕೊಂಡು ಚಕ್ರವ್ಯೂಹ ರಚಿಸಿ, ತಮ್ಮ ಕುಟುಂಬವನ್ನು ಸೋಲಿಸಲು ಸಂಚು ನಡೆಸಿದ್ದಾರೆ. ಇದಕ್ಕೆ ತಾವು ಹೆದರುವುದಿಲ್ಲ ಕುತಂತ್ರಕ್ಕೆ ತಕ್ಕ ಉತ್ತರ ನೀಡುವುದಾಗಿ 'ಈ ಟಿವಿ ಭಾರತ್'ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಹೇಳಿದ್ದಾರೆ.
ತಮ್ಮ ವಿರೋಧಿಗಳು ಹೆಣೆದ ಚಕ್ರವ್ಯೂಹ ಭೇದಿಸಲು ತಾವು ಮಂಡ್ಯ ಕ್ಷೇತ್ರದಲ್ಲಿ ಹೆಚ್ಚಿನ ಪ್ರಚಾರ ನಡೆಸಬೇಕಾಯಿತು. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅತ್ಯಧಿಕ ಮತಗಳನ್ನು ಪಡೆದು ಗೆಲ್ಲುತ್ತಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆಗಾಗಿ ಮಾಡಿಕೊಂಡ ಮೈತ್ರಿ ಧರ್ಮ ಸ್ಥಳೀಯವಾಗಿ ನಿರೀಕ್ಷಿತ ಮಟ್ಟದಲ್ಲಿ ಪಾಲನೆಯಾಗಿಲ್ಲ. ಅದಾಗ್ಯೂ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಪಕ್ಷಗಳು 18 ರಿಂದ 20 ಸೀಟುಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮೈತ್ರಿ ಧರ್ಮ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸರಿಯಾಗಿ ಪಾಲನೆಯಾಗಿದೆ. ನಾಯಕರ ಮಟ್ಟದಲ್ಲೂ ಯಾವುದೇ ಕುಂದುಂಟಾಗಿಲ್ಲ. ಆದರೆ ಸ್ಥಳೀಯವಾಗಿ ಕೆಲವು ಅಂಶಗಳಿಂದಾಗಿ ಮೈತ್ರಿ ಧರ್ಮವನ್ನು ಸಂಪೂರ್ಣವಾಗಿ ಅನುಸರಿಸಲಾಗಿಲ್ಲ. ಇದಕ್ಕೆ ನಾಯಕರು ಕಾರಣರಲ್ಲ ಎಂದು ಹೇಳಿದರು.
ಮಂಡ್ಯ ಕ್ಚೇತ್ರವನ್ನು ನಾನು ಪ್ರತಿಷ್ಟೆಯಾಗಿ ತಗೆದುಕೊಂಡಿಲ್ಲ:
ನಾನು ಮಂಡ್ಯದ ಚುನಾವಣೆಯನ್ನು ನನ್ನ ಪ್ರತಿಷ್ಟೆಯಾಗಿ ತೆಗೆದುಕೊಂಡಿಲ್ಲ ಹಾಗೂ ಮಗನ ಚುನಾವಣೆ ಅಂತಾನು ಹೆಚ್ಚಿನ ಆದ್ಯತೆ ನೀಡಿಲ್ಲ. ಕೆಲವರು ಕುತಂತ್ರ ರಾಜಕಾರಣ ನಡೆಸಿ ಪಕ್ಷವನ್ನ ಮುಗಿಸಲು ವ್ಯವಸ್ಥಿತ ಸಂಚು ನಡೆಸಿದ್ದರಿಂದ ಅದನ್ನ ವಿಫಲಗೊಳಿಸಲು ಹೆಚ್ಚಿನ ಗಮನ ಮಂಡ್ಯಕ್ಕೆ ನೀಡಬೇಕಾಯಿತು.
ಎರಡನೇ ಹಂತದ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಈ ತಿಂಗಳ 19 ರಂದು ಬಳ್ಳಾರಿ, ರಾಯಚೂರು, ಕಲಬುರಗಿ ಮುಂತಾದ ಕಡೆ ಪ್ರಚಾರ ನಡೆಸಲಿದ್ದಾರೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಸುಭದ್ರ:
ಸಿಎಂ ಲೋಕಸಭೆ ಚುನಾವಣೆ ಬಳಿಕ ಜೆಡಿಎಸ್ - ಕಾಂಗ್ರೆಸ್ ದೋಸ್ತಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡರು ಮಾತನಾಡುತ್ತಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿಎಂ. ಕೆಲವರು ಕುಮಾರಸ್ವಾಮಿ ಸರ್ಕಾರ ಪತನಗೊಳ್ಳುವ ಕನಸು ಕಾಣುತ್ತಿದ್ದಾರೆ. ಅದು ಫಲಿಸುವುದಿಲ್ಲವೆಂದರು. ಈ ಸರ್ಕಾರ ಇನ್ನೂ ನಾಲ್ಕು ವರ್ಷ ಸುಭದ್ರವಾಗಿರುತ್ತದೆ. ಯಾರಿಂದಲೂ ಸರ್ಕಾರ ಬೀಳಿಸಲಾಗದು ಎಂದು ಆತ್ಮವಿಶ್ವಾಸದಿಂದ ಹೇಳಿದರು.