ಬೆಂಗಳೂರು: ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ ರಚನೆಗೆ ಸರ್ಕಾರದ ಮಂಜೂರಾತಿ ನೀಡಿದ್ದು, ಮೊನ್ನೆ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾದ ಟಿ.ಎಂ.ವಿಜಯ ಭಾಸ್ಕರ್ ಅವರನ್ನು ಆಯೋಗದ ಅಧ್ಯಕ್ಷರಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಆಡಳಿತ ಸುಧಾರಣೆ ಆಯೋಗವನ್ನು 2000ರಲ್ಲಿ ಹಾರನಹಳ್ಳಿ ರಾಮಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಈ ಆಯೋಗವು ತನ್ನ ಅಂತಿಮ ವರದಿಯನ್ನು ಡಿಸೆಂಬರ್ 2007 ರಲ್ಲಿ ಸರ್ಕಾರಕ್ಕೆ ಸಲ್ಲಿಸಿತ್ತು. ಆಯೋಗವು ಒಟ್ಟು 256 ಶಿಫಾರಸುಗಳನ್ನು ಮಾಡಿತ್ತು. ಈ ಶಿಫಾರಸುಗಳಲ್ಲಿ ರಾಜ್ಯ ಸರ್ಕಾರ 234 ಶಿಫಾರಸುಗಳನ್ನು ಜಾರಿಗೆ ತಂದಿದೆ. ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಬಗ್ಗೆ ಸಮಗ್ರ ಮೌಲ್ಯಮಾಪನ ಅಗತ್ಯವಿದೆ.
ಕಳೆದ ಎರಡು ದಶಕಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಬದಲಾಗುತ್ತಿರುವ ತಾಂತ್ರಿಕತೆ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳು ಕಾರ್ಯನಿರ್ವಹಿಸುವ ರೀತಿಯಲ್ಲಿ ಸಂಪೂರ್ಣ ಪರಿವರ್ತನೆಯಾಗಿದೆ. ಈ ಹಿನ್ನೆಲೆ ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತ ಮತ್ತು ಆಡಳಿತ ವ್ಯವಸ್ಥೆಗಳನ್ನು ಮತ್ತೊಮ್ಮೆ ಸಮಗ್ರವಾಗಿ ಮೌಲ್ಯಮಾಪನ ಮಾಡುವ ಅವಶ್ಯಕತೆ ಇದೆ.
ಮುಂಬರುವ ದಶಕಗಳಲ್ಲಿ ಸೂಕ್ತವಾದ ಹೊಸ ಆಡಳಿತ ಮತ್ತು ಆಡಳಿತ ವ್ಯವಸ್ಥೆಯನ್ನು ರಚಿಸಲು ಹೊಸ ಬದಲಾವಣೆಗಳನ್ನು ಮತ್ತು ಪರಿವರ್ತನೆಗಳನ್ನು ಶಿಫಾರಸು ಮಾಡುವ ಅಗತ್ಯ ಇರುವ ಹಿನ್ನೆಲೆ ಈ ಕೂಡಲೇ ಜಾರಿಗೆ ಬರುವಂತೆ ಕರ್ನಾಟಕ ಆಡಳಿತ ಸುಧಾರಣ ಆಯೋಗ-2 ರ ರಚನೆಗೆ ಸರ್ಕಾರದ ಮಂಜೂರಾತಿ ನೀಡಿದೆ. ಇದಕ್ಕೆ ಮೊನ್ನೆಯಷ್ಟೇ ನಿವೃತ್ತರಾದ ಟಿ.ಎಂ.ವಿಜಯ್ ಭಾಸ್ಕರ್ ಅವರನ್ನು ಅಧ್ಯಕ್ಷರಾಗಿ ಸರ್ಕಾರ ನೇಮಿಸಿದೆ.
2ನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಎಚ್. ರಾಮಸ್ವಾಮಿ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳ ಅನುಷ್ಠಾನದ ಪರಿಶೀಲನೆ ನಡೆಸಲಿದೆ. ಇಲಾಖೆಗಳ ಪುನರ್ ರಚನೆ, ಸರ್ಕಾರದ ಎಲ್ಲ ಹಂತಗಳಲ್ಲಿನ ಸಿಬ್ಬಂದಿ ಬಲದ ಸಮರ್ಪಕ ಹೊಂದಾಣಿಕೆಗೆ ಶಿಫಾರಸು ಮಾಡಲಿದೆ.
ತಂತ್ರಜ್ಞಾನದ ಆಗಮನದಿಂದಾಗಿ ಹಲವು ಇಲಾಖೆಗಳಲ್ಲಿ ಅನಗತ್ಯವಾಗಿರುವ ಹುದ್ದೆಗಳನ್ನು ಗುರುತಿಸುವಿಕೆ, ಇಲಾಖೆ, ಮಂಡಳಿಗಳು ಹಾಗೂ ನಿಗಮಗಳ ವಿಲೀನಗೊಳಿಸುವ ಸಾಧ್ಯತೆಗಳ ಬಗ್ಗೆ ಸೂಚಿಸಬೇಕಾಗಿದೆ. ಜೊತೆಗೆ ಸರ್ಕಾರದಲ್ಲಿನ ಹಾಗೂ ಸರ್ಕಾರಿ ಸ್ವಾಮ್ಯದ ಉದ್ಯಮ/ಮಂಡಳಿಗಳು/ನಿಗಮಗಳಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಆಡಳಿತ ಮತ್ತು ಆಡಳಿತ ವ್ಯವಸ್ಥೆಯ ಸಮಗ್ರ ಅಧ್ಯಯನ ಮಾಡಬೇಕು. ಮೌಲ್ಯಮಾಪನ ಮಾಡಿ ಮುಂಬರುವ ದಶಕಗಳಿಗೆ ಅವಶ್ಯಕವಾದ ಸೂಕ್ತ ಆಡಳಿತ ವ್ಯವಸ್ಥೆ ಹಾಗೂ ರಚನಾತ್ಮಕ ಸುಧಾರಣೆಗಳನ್ನು ಶಿಫಾರಸು ಮಾಡಬೇಕು.
ಆಯೋಗವು 2 ವರ್ಷಗಳ ಅವಧಿಯಲ್ಲಿ ತನ್ನ ಅಂತಿಮ ವರದಿ ನೀಡಬೇಕು ಹಾಗೂ ಮಧ್ಯಂತರ ವರದಿಯನ್ನು ಒಂದು ವರ್ಷ ಅವಧಿಯೊಳಗೆ ಸಲ್ಲಿಸುವಂತೆ ನಿರ್ದೇಶನ ನೀಡಲಾಗಿದೆ.