ಬೆಂಗಳೂರು: ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡಗಳ (ಎಸ್ಟಿ) ವರ್ಗಗಳಿಗೆ ಗ್ರಾಮ ಪಂಚಾಯತ್ನ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನೀಡುವ ಪ್ರಕ್ರಿಯೆಯಲ್ಲಿ ಶೇ.50ಕ್ಕಿಂತ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿದ್ದಲ್ಲಿ ದಶಾಂಶದ ಹೊಂದಾಣಿಕೆ ಮಾಡುವುದರಿಂದ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಹುಮ್ನಾಬಾದ್ ತಾಲೂಕಿನ ಚಂದನಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಶಿವಾನಂದ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಚಂದನಹಳ್ಳಿ ಪಂಚಾಯ್ತಿಯಲ್ಲಿ ಒಟ್ಟು 19 ಸ್ಥಾನಗಳಲ್ಲಿವೆ. ಅದರಲ್ಲಿ 6 ಸ್ಥಾನ ಎಸ್ಸಿ 5 ಸ್ಥಾನ ಎಸ್ಟಿ ಸೇರಿ 11 ಸ್ಥಾನಗಳಿದ್ದಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಹೆಚ್ಚಾಗಿದೆ ಎಂಬಂತಾಗಲಿದೆ. ಆದರೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 44(2)(ಸಿ) ಪ್ರಕಾರ ಎಸ್ಸಿ, ಎಸ್ಟಿ ವರ್ಗಗಳಿಗೆ ಮೀಸಲಾತಿ ನೀಡುವ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಕಡಿಮೆಯಾಗದಂತೆ ನಿಗದಿ ಪಡಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಅಲ್ಲದೇ, ಈ ಪ್ರಕ್ರಿಯೆಯಲ್ಲಿ ಮೀಸಲಾತಿಯನ್ನು ಪರಿಗಣಿಸುವ ಸಂದರ್ಭದಲ್ಲಿ 5.82 ಮತ್ತು 4.64 ಹುದ್ದೆಗಳನ್ನು ಕಡಿಮೆ ಸಂಖ್ಯೆಗಳಿಗೆ ಅಂದರೆ 5 ಮತ್ತು 4ಕ್ಕೆ ಅಂತಿಮಗೊಳಿಸಿದಲ್ಲಿ ಆಗ ಅದು ಪ್ರತಿ ವರ್ಗಕ್ಕೆ ಶೇ.50ಕ್ಕಿಂತ ಕಡಿಮೆ ಆಗಲಿದೆ. ಹೆಚ್ಚಿನ ಸಂಖ್ಯೆಗೆ ಪರಿಗಣಿಸಿದಲ್ಲಿ ಅಂದರೆ 6 ಮತ್ತು 5ಕ್ಕೆ ಪೂರ್ಣಗೊಳ್ಳುಲಿದ್ದು, ಶೇ.50ಕ್ಕೂ ಹೆಚ್ಚಾಗಲಿದೆ. ಹೀಗಾಗಿ ಪ್ರತಿ ಸಂದರ್ಭದಲ್ಲಿಯೂ ದೋಷ ಕಂಡು ಹಿಡಿಯಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಮಾನವನನ್ನು ಪೂರ್ಣ ಸಂಖ್ಯೆಗಿಂತ ಕಡಿಮೆಯಾಗಿ ವಿಂಗಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ವ್ಯಕ್ತಿಗಳಿಂದ ನಿರ್ವಹಿಸಲ್ಪಡುವ ಹುದ್ದೆಗಳಿಗೆ ದಶಮಾಂಶಗಳನ್ನು ಪೂರ್ಣ ಸಂಖ್ಯೆಗೆ ಪೂರ್ಣಾಂಕಗೊಳಿಸುವ ಮೂಲಕ ಮಾತ್ರ ಪರಿಣಾಮ ಬೀರದಂತೆ ನೋಡಿಕೊಳ್ಳಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. ಜೊತೆಗೆ, ಮೀಸಲು ಪ್ರಕ್ರಿಯೆಯಲ್ಲಿ ರಾಜ್ಯ ಚುನಾವಣಾ ಆಯೋಗವು (ಎಸ್‌ಇಸಿ) ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಹುದ್ದೆಗಳಿಗೆ ಮೀಸಲಿಟ್ಟಿರುವ ಮೀಸಲಾತಿಯಲ್ಲಿ ಯಾವುದೇ ತಾರತಮ್ಯ ಉಂಟಾಗಿಲ್ಲ. ಎಸ್‌ಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಹುದ್ದೆಗಳ ಸಂಖ್ಯೆಯನ್ನು ನಿರ್ಧರಿಸಲು ಎಸ್‌ಇಸಿ ಅಳವಡಿಸಿಕೊಂಡ ಸೂತ್ರ ಸಮಂಜಸವಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ ಏನು ?: ಹುಮ್ನಾಬಾದ್ ತಾಲೂಕಿನ ಚಂದನಹಳ್ಳಿ ಗ್ರಾಮ ಪಂಚಾಯತ್‌ನಲ್ಲಿ ಒಟ್ಟು 19 ಸ್ಥಾನಗಗಳಿದ್ದು, ಅದರಲ್ಲಿ ಆರು ಸ್ಥಾನ ಪರಿಶಿಷ್ಟ ಜಾತಿ, ಐದು ಸ್ಥಾನ ಪರಿಶಿಷ್ಟ ಪಂಗಡ ಹಾಗೂ 8 ಸ್ಥಾನ ಸಾಮಾನ್ಯ ವರ್ಗ ಸೇರಿದಂತೆ ಇತರ ವರ್ಗಗಳಿಗೆ ಮೀಸಲಿಡಲಾಗಿದೆ.
ಅಲ್ಲದೆ, ಆರು ಸ್ಥಾನಗಳು ಎಸ್ಸಿ ಸದಸ್ಯರಿಗೆ ಮತ್ತು ಐದು ಸ್ಥಾನಗಳು ಎಸ್‌ಟಿ ಸದಸ್ಯರಿಗೆ ಮೀಸಲಾಗಿದ್ದು 11 ಹುದ್ದೆಗಳಿವೆ. ಸಾಮಾನ್ಯ ವರ್ಗ ಸೇರಿ ಒಟ್ಟು 19 ಸ್ಥಾನಗಳಿರುವ ಸಂದರ್ಭದಲ್ಲಿ ಮೀಸಲಾತಿ ಶೇ.50 ಎಂದಾದರೆ 9.5 ಇಲ್ಲವೇ 10ರಷ್ಟು ಮಾತ್ರ ಆಗಲಿದೆ. ಇದರಲ್ಲಿ ಹೆಚ್ಚುವರಿಯಾಗಿ ಒಂದು ಹುದ್ದೆಯನ್ನು ಪ್ರವರ್ಗ-ಎ ಮತ್ತು ಪ್ರವರ್ಗ-ಬಿಗೆ ಹಂಚಬಹುದಾಗಿತ್ತು. ಆದರೆ, ಈ ಎರಡೂ ವರ್ಗಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ನೀಡಬೇಕು. ಇಲ್ಲವಾದಲ್ಲಿ ಸಾಮಾನ್ಯ ವರ್ಗಕ್ಕೆ ಹಂಚಿಕೆ ಮಾಡಬಹುದಾಗಿತ್ತು.
ಆದರೆ, ರೋಸ್ಟರ್ ಪ್ರಕಾರ ಮೀಸಲಾತಿ 2010ರ ಸಾಲಿನ ಮೊದಲ ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. 2015ನೇ ಸಾಲಿನಲ್ಲಿ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಟಿ ಮಹಿಳೆಗೆ ನೀಡಲಾಗಿತ್ತು. 2021ರಲ್ಲಿ ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮಹಿಳೆಗೆ ಮೀಸಲಿಡಲಾಗಿದೆ. ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ ಮತ್ತು ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು.
ಹೀಗಾಗಿ 2010ರಿಂದ 2021ರವರೆಗೂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಎಸ್ಸಿ, ಎಸ್ಟಿ ಮತ್ತು ಸಾಮಾನ್ಯ ವರ್ಗಗಳಿಗೆ ಮಾತ್ರ ಲಭ್ಯವಾಗುತ್ತಿವೆ. ಆದರೆ, ಪ್ರವರ್ಗ-ಎ ಅಥಾವ ಪ್ರವರ್ಗ-ಬಿಗೆ ಲಭ್ಯವಾಗುತ್ತಿಲ್ಲ. ಅಲ್ಲದೆ, ಎಸ್ಸಿ, ಎಸ್ಟಿ ವರ್ಗಗಳಲ್ಲಿಯೂ ಮಹಿಳೆಗೆ ಮಾತ್ರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಲಭ್ಯವಾಗುತ್ತಿದ್ದು, ಪುರುಷನಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಪ್ರವರ್ಗ- ಎ ಮತ್ತು ಪ್ರವರ್ಗ- ಬಿ ಗಳಿಗೂ ಮೀಸಲಾತಿ ಲಭ್ಯವಾಗುವಂತೆ ಮಾಡಬೇಕು. ಅಲ್ಲದೆ, 2020-23ನೇ ಸಾಲಿನಲ್ಲಿಯೂ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ಮಹಿಳೆಗೆ ಮೀಸಲಿಡಲಾಗಿದೆ. ಇದರ ಬದಲಾಗಿ ಸರತಿ(ರೋಟೇಷನ್)ಪದ್ದತಿಯಲ್ಲಿ ಮೀಸಲಾತಿಯನ್ನು ನಿಗದಿ ಪಡಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದರು.
ಇದನ್ನೂ ಓದಿ: ಅಂಬೇಡ್ಕರ್, ದಲಿತರ ಮೀಸಲಾತಿ ಕುರಿತ ಆಕ್ಷೇಪಾರ್ಹ ನಾಟಕ : ಜೈನ್ ಕಾಲೇಜಿನ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ