ಬೆಂಗಳೂರು: ಟಿಪ್ಪು ಜಯಂತಿ ಹಾಗೂ ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ ಆಚರಿಸಿಲ್ಲ. ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು ಎಂದು ವಿಧಾನಸೌಧದ ಬಳಿ ಆಯೋಜಿಸಿದ್ದ ಪೊಲೀಸರ ಮ್ಯಾರಾಥಾನ್ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಟಿಪ್ಪು ಅನೇಕ ವಿವಾದ ಹೊಂದಿರುವ ರಾಜ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ. ಅದಕ್ಕಾಗಿಯೇ ಪಠ್ಯದಿಂದ ಆತನ ಇತಿಹಾಸ ಕೈ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ. ಟಿಪ್ಪು ವಿವಾದವನ್ನು ಉಪ ಚುನಾವಣೆಯ ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡದಿರುವ ರಾಜ್ಯ ಸರ್ಕಾರ ಸತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹತಾಶೆಯಿಂದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ನೆರವು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ಹಾಗೆ ಔರಾದ್ಕರ್ ವರದಿ ಜಾರಿ ಹಿನ್ನೆಲೆ ಸಿಬ್ಬಂದಿಯ ಅಸಮಾಧಾನದ ಬಗ್ಗೆ ಮಾತಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಪೊಲೀಸ್ ಸಿಬ್ಬಂದಿ ಯಾರೂ ಅಸಮಾಧಾನಗೊಂಡಿಲ್ಲ. ಬೆಸಿಕ್ ಸ್ಯಾಲರಿ ಕಡಿಮೆ ಇದೆ. ಅದನ್ನು ಸರಿದೂಗಿಸುವ ಸಲುವಾಗಿ ಎಲ್ಲಾ ಇಲಾಖೆಗೆ ಒಂದೇ ಕಾನೂನು ಇದೆ. ಒಂದೇ ಮಾದರಿಯ ಸಂಬಳ ತರಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.