ಬೆಂಗಳೂರು: ರಾಜ್ಯ ಸರ್ಕಾರದಿಂದ ಆಚರಣೆ ಮಾಡಲಾಗುತ್ತಿದ್ದ ಟಿಪ್ಪು ಜಯಂತಿ ರದ್ದುಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ. ಕೆಲ ಶಾಸಕರು ಜಯಂತಿ ರದ್ದು ಮಾಡುವಂತೆ ಮನವಿ ಮಾಡಿದ್ದರು. ಟಿಪ್ಪು ಜಯಂತಿ ಮಾಡಿದರೆ ಗಲಾಟೆ, ಸಾವು ನೋವು ಆಗುತ್ತದೆ ಅಂತ ಕೆಲ ಶಾಸಕರು ಮನವಿ ಮಾಡಿದ್ದರು. ಹಾಗಾಗಿ ಕ್ಯಾಬಿನೆಟ್ನಲ್ಲಿ ನಿರ್ಧಾರ ಮಾಡಿ ಟಿಪ್ಪು ಜಯಂತಿ ರದ್ದು ಮಾಡಿದ್ದೇವೆ ಎಂದಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೇಳೆಯಲ್ಲಿ ಆಚರಿಸಿಕೊಂಡು ಬರಲಾಗುತ್ತಿದ್ದ ಟಿಪ್ಪು ಜಯಂತಿಯನ್ನು ರದ್ದುಪಡಿಸಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಟಿಪ್ಪು ಜಯಂತಿ ರದ್ದುಪಡಿಸುವಂತೆ ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರಿ ಆಚರಣೆ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
2016 ರಲ್ಲಿ ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತ ಇಲಾಖೆ ಮೂಲಕ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ಚಾಲನೆ ನೀಡಿತ್ತು. ಇದನ್ನು ಖಂಡಿಸಿ ಬಿಜೆಪಿ ಹೋರಾಟ ನಡೆಸಿತ್ತು, ಅಲ್ಲದೇ ಅಂದು ಕೊಡಗಿನಲ್ಲಿ ನಡೆದ ಗಲಾಟೆಯಲ್ಲಿ ಕುಟ್ಟಪ್ಪ ಎನ್ನುವ ವ್ಯಕ್ತಿ ಮೃತಪಟ್ಟಿದ್ದರು. ಇದರಿಂದ ರಾಜ್ಯಾದ್ಯಂತ ಹೋರಾಟ ವಿಸ್ತರಣೆಯಾಗಿತ್ತು.
ನಂತರ 2017 ರಲ್ಲಿ ಅಲ್ಪಸಂಖ್ಯಾತ ಇಲಾಖೆ ಬದಲಾಗಿ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಆಚರಿಸಲಾಗುತ್ತ ಬರಲಾಗುತ್ತಿದೆ. ಆದರೆ, ಪ್ರತಿ ವರ್ಷದ ಆಚರಣೆ ವೇಳೆಯಲ್ಲಿಯೂ ಗಲಾಟೆ ಆಗುತ್ತಿದ್ದ ಕಾರಣ ಹಾಗು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಟಿಪ್ಪು ಜಯಂತಿ ರದ್ದುಪಡಿಸುವ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಇಂದು ಅಧಿಕೃತವಾಗಿ ಟಿಪ್ಪು ಜಯಂತಿ ರದ್ದುಗೊಳಿಸಿ ಆದೇಶ ಹೊರಡಿಸಿದೆ.