ಬೆಂಗಳೂರು: ಅಧಿವೇಶನ ಜನರ ಸಮಸ್ಯೆಗಳು, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚೆ ನಡೆಸುವ ವೇದಿಕೆಯಾಗಿದೆ. ಆದರೆ, ಇತ್ತೀಚಿಗಿನ ದಿನಗಳಲ್ಲಿ ಪ್ರತಿಪಕ್ಷಗಳ ಪ್ರತಿಭಟನೆ, ಸರ್ಕಾರದ ಹಠಮಾರಿತನದಿಂದ ಕಲಾಪದ ಸಮಯ ವ್ಯರ್ಥವಾಗುತ್ತಿದೆ.
ಇದೀಗ ಅಹೋರಾತ್ರಿ ಧರಣಿ ನಡೆಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವಿನ ಜಟಾಪಟಿಗೆ ಜಂಟಿ ಅಧಿವೇಶನ ಆಹುತಿಯಾಗುತ್ತಿದೆ. ಇದರಿಂದ ಸಾರ್ವಜನಿಕರ ಹಣ ಹಾಗೂ ಅಧಿವೇಶನದ ಉದ್ದೇಶವೂ ವ್ಯರ್ಥವಾಗುತ್ತಿದೆ.
ಸದ್ಯ ಜಂಟಿ ಅಧಿವೇಶನ ನಡೆಯುತ್ತಿದೆ. ಫೆ. 14ರಿಂದ ಪ್ರಾರಂಭವಾಗಿರುವ ಜಂಟಿ ಅಧಿವೇಶನವನ್ನು ಫೆ.25ರ ವರೆಗೆ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಉದ್ದೇಶಿತ 10 ದಿನಗಳ ಜಂಟಿ ಅಧಿವೇಶನ ನಡೆಯುವುದು ಅನುಮಾನವಾಗಿದೆ. ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಪ್ರತಿಪಕ್ಷ ಕಾಂಗ್ರೆಸ್ ಸದನದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ.
ಇತ್ತ ಆಡಳಿತ ಪಕ್ಷವೂ ಪಟ್ಟು ಬಿಡದೆ ಕಾಂಗ್ರೆಸ್ ಜೊತೆ ಸಂಘರ್ಷಕ್ಕೆ ಇಳಿದಿದೆ. ಆಡಳಿತ ಪಕ್ಷ ಹಾಗೂ ಪ್ರಮುಖ ಪ್ರತಿಪಕ್ಷಗಳ ಜಟಾಪಟಿಯಿಂದ ಸಾರ್ವಜನಿಕರ ಸಮಸ್ಯೆಗಳು, ಅಭಿವೃದ್ಧಿ ಕುಂಠಿತ, ಅನುದಾನ ಕೊರತೆ, ರೈತರ ಸಮಸ್ಯೆ, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಬೇಕಾಗಿದ್ದ ಸದನ ಕಲಾಪ ವ್ಯರ್ಥವಾಗುತ್ತಿದೆ. ಈಗಾಗಲೇ ಜಂಟಿ ಅಧಿವೇಶನದ ಕಲಾಪ ಪ್ರತಿಪಕ್ಷ ಕಾಂಗ್ರೆಸ್ ನ ಪ್ರತಿಭಟನೆ ಹಿನ್ನೆಲೆ ಮೊಟಕುಗೊಳ್ಳುತ್ತಿದೆ. ಬೆಳಗ್ಗಿನ ಎರಡು ತಾಸು ಮಾತ್ರ ಕಲಾಪ ನಡೆಯುತ್ತಿದ್ದು, ಬಳಿಕ ಕಲಾಪವನ್ನು ಮೊಟಕುಗೊಳಿಸಲಾಗುತ್ತಿದೆ.
ಜಂಟಿ ಅಧಿವೇಶನದ ಮೊದಲ ವಾರದ ಕಲಾಪವಂತೂ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಆಡಳಿತ ಪಕ್ಷದ ಸಂಘರ್ಷಕ್ಕೆ ಚರ್ಚೆ ನಡೆಯದೇ ಆಹುತಿಯಾಗಿದೆ. ಕೇವಲ ಪ್ರತಿಭಟನೆಗೆ ಸೀಮಿತವಾಗುತ್ತಿರುವ ಕಲಾಪದ ಸಮಯ ವ್ಯರ್ಥವಾಗುತ್ತಿರುವುದರಿಂದ ಸಾರ್ವಜನಿಕರ ಹಣವೂ ಪೋಲಾಗುತ್ತಿದೆ.
ನಾಲ್ಕು ವರ್ಷಗಳ ಕಲಾಪ ಅವಧಿ ಏನಿದೆ?: ಅಧಿವೇಶನಗಳು ಪ್ರತಿಭಟನೆ, ಧರಣಿಗಳಿಗೆ ಸೀಮಿತವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಜನರ ಸಮಸ್ಯೆಗಳು, ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆಯಾಗಬೇಕಾದ ಅಧಿವೇಶನ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಜಂಗೀ ಕುಸ್ತಿಗೆ ಮಾತ್ರ ಸೀಮಿತವಾಗುತ್ತಿರುವುದು ಜನರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕಲಾಪ ನಡೆದ ಅವಧಿಯ ವಿವರ ಹೀಗಿದೆ.
2018: ಫೆ.5-9/ಫೆ.16-23- 11 ದಿನ- 43.34 ಗಂಟೆ
ಮೇ 25- 1 ದಿನ- 4.7 ಗಂಟೆ
ಮೇ 19- 1 ದಿನ- 3 ಗಂಟೆ
ಜು. 2-13- 12 ದಿನ- 53.05 ಗಂಟೆ
ಡಿ.10-21- 10 ದಿನ- 40.33 ಗಂಟೆ
2019: ಫೆ.6-14- 7 ದಿನ- 14.10 ಗಂಟೆ
ಜು.12-23- 6 ದಿನ- 32.20 ಗಂಟೆ
ಜು.29-31- 2 ದಿನ- 3.33 ಗಂಟೆ
ಅ.10-12- 3 ದಿನ- 17.55 ಗಂಟೆ
2020: ಫೆ.17-20/ಮಾ.2-24- 21 ದಿನ- 116 ಗಂಟೆ
ಸೆ.21-26- 6 ದಿನ- 39 ಗಂಟೆ
ಡಿ.7-10- 4 ದಿನ- 19.29 ಗಂಟೆ
2021: ಜ.28-ಫೆ.5- 7 ದಿನ- 33.50 ಗಂಟೆ
ಮಾ.4-24- 13 ದಿನ- 44.30 ಗಂಟೆ
ಸೆ.13-24 - 12 ದಿನ- 59 ಗಂಟೆ
ಡಿ.13-24- 10 ದಿನ- 52 ಗಂಟೆ
ಇತ್ತ ಕಲಾಪ ಸಮಯ ವ್ಯರ್ಥ, ಅತ್ತ ಸಾರ್ವಜನಿಕ ಹಣ ಪೋಲು: ಅಧಿವೇಶನಕ್ಕಾಗಿ ಸರ್ಕಾರ ಕೋಟ್ಯಾಂತರ ರೂಪಾಯಿ ಹಣವನ್ನು ಖರ್ಚು ಮಾಡುತ್ತದೆ. ಅಧಿವೇಶನದಿಂದ ಬೊಕ್ಕಸದ ಮೇಲಾಗುವ ಹೊರೆಯೂ ಅಷ್ಟಿಷ್ಟಲ್ಲ. ಕಲಾಪ ಸಮಯ ವ್ಯರ್ಥವಾಗುತ್ತಿರುವುದರಿಂದ ಸಾರ್ವಜನಿಕ ಹಣವೂ ಗಣನೀಯವಾಗಿ ಪೋಲಾಗುತ್ತದೆ. ಹೀಗಾಗಿ, ಪ್ರತಿಪಕ್ಷಗಳು, ಆಡಳಿತ ಪಕ್ಷ ಹೆಚ್ಚಿನ ಜವಾಬ್ದಾರಿಯುತವಾಗಿ ವರ್ತಿಸುವ ಬದ್ಧತೆ ಹೊಂದಿದ್ದಾರೆ.
ಬೆಂಗಳೂರು ಅಧಿವೇಶನಕ್ಕಾಗಿ ನಿತ್ಯ 50-65 ಲಕ್ಷ ರೂ. ವೆಚ್ಚ ತಗುಲುತ್ತದೆ ಎಂದು ವಿಧಾನಸಭೆ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ದಿನದ ಕಲಾಪ ವ್ಯರ್ಥವಾದರೆ ಸಾರ್ವಜನಿಕ ಹಣವೂ ವ್ಯರ್ಥವಾದಂತೆ. ಇದರಲ್ಲಿ ಬಹುತೇಕ ವೆಚ್ಚ ತಗುಲುವುದು ಶಾಸಕರ ಟಿಎ ಹಾಗೂ ಡಿಎಗೆ. ಕಾಂಗ್ರೆಸ್ ಶಾಸಕರು ಅಹೋರಾತ್ರಿ ಧರಣಿ ಪ್ರಾರಂಭಿಸಿ ಐದು ದಿನ ಕಳೆದಿದೆ.
ಧರಣಿ ನಿರತರಿಗೆ ರಾತ್ರಿ ಊಟ, ಮಧ್ಯಾಹ್ನ ಊಟ, ಬೆಳಗ್ಗಿನ ತಿನಿಸನ್ನು ವಿಧಾನಸಭೆ ಸಚಿವಾಲಯವೇ ಖಾಸಗಿ ಹೋಟೆಲ್ನಿಂದ ಪೂರೈಕೆ ಮಾಡುತ್ತಿದೆ. ಸುಮಾರು 120 ಮಂದಿಗೆ ಭೋಜನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿ ಭೋಜನಕ್ಕೆ ಕನಿಷ್ಠ 400 - 500 ರೂ. ಆಗಬಹುದು ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ. ಈ ಹೊರೆಯೂ ಬೊಕ್ಕಸದ ಮೇಲೆ ಬಿದ್ದಿದೆ.
ಅದರಲ್ಲೂ ಬೆಳಗಾವಿ ಅಧಿವೇಶನಕ್ಕೆ ಸರ್ಕಾರ 10 ಕೋಟಿ ರೂಪಾಯಿಗೂ ಹೆಚ್ಚ ಹಣವನ್ನು ವ್ಯಯಿಸುತ್ತದೆ. ಕಳೆದ ವರ್ಷ 2020 ಡಿಸೆಂಬರ್ ನಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ 20 ಕೋಟಿ ರೂ.ಗೂ ಅಧಿಕ ವೆಚ್ಚ ತಗುಲಿದೆ. 2018ರಲ್ಲಿ ನಡೆದ ಬೆಳಗಾವಿ ಅಧಿವೇಶನಕ್ಕೆ ಸರ್ಕಾರ ಬರೋಬ್ಬರಿ 13.85 ಕೋಟಿ ರೂ. ಖರ್ಚು ಮಾಡಿದೆ.
2017ರಲ್ಲಿ ಬೆಳಗಾವಿ ಅಧಿವೇಶನಕ್ಕಾಗಿ ಬರೋಬ್ಬರಿ 21.57 ಕೋಟಿ ರೂ. ಖರ್ಚು ಮಾಡಲಾಗಿತ್ತು. ಇನ್ನು 2016ರಲ್ಲಿ ನಡೆದ ಬೆಳಗಾವಿ ಅಧಿವೇಶನ ವೇಳೆ 8.2ಕೋಟಿ ರೂ. ವೆಚ್ಚ ತಗುಲಿತ್ತು. ಕೋಟಿ ಕೋಟಿ ಸಾರ್ವಜನಿಕ ಹಣವನ್ನು ಅಧಿವೇಶನಕ್ಕಾಗಿ ಬಳಸಲಾಗುತ್ತದೆ. ಆದರೆ, ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಜಂಗೀ ಕುಸ್ತಿಗೆ ಸಾರ್ವಜನಿಕ ಹಣವನ್ನು ಪೋಲು ಮಾಡುತ್ತಿದೆ.
ಓದಿ: ಆರ್ಎಸ್ಎಸ್ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್ ಸದಸ್ಯರು: ಕಲಾಪ ನಾಳೆಗೆ ಮುಂದೂಡಿದ ಸ್ಪೀಕರ್