ಬೆಂಗಳೂರು: ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಮಂತ್ರಿ ಆಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಂತೆ ರಾಜ್ಯದ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಲು ರಾಜ್ಯ ಬಿಜೆಪಿ ನಾಯಕರು ಸದ್ದಿಲ್ಲದೇ ಸಿದ್ಧತೆ ಮಾಡುತ್ತಿದ್ದಾರಾ ?ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಇದಕ್ಕೆ ಕಳೆದೆರಡು ದಿನಗಳಿಂದ ಕೇಸರಿ ಪಡೆ ನಾಯಕರು ನೀಡುತ್ತಿರುವ ಹೇಳಿಕೆಗಳೇ ಇಂಬು ನೀಡುತ್ತಿವೆ.
ಮಿಷನ್ 150 ಅಂತಾ ವಿಧಾನಸಭಾ ಚುನಾವಣೆಯಲ್ಲಿ ಅಲ್ಪದರಲ್ಲೇ ಅಧಿಕಾರ ಹಿಡಿಯುವುದರಿಂದ ವಂಚಿತಗೊಂಡಿದ್ದ ಬಿಜೆಪಿ ನಾಯಕರು ಅವಸರವಾಗಿ ಫಲಿತಾಂಶ ಬರುತ್ತಿದ್ದಂತೆ ಸರ್ಕಾರ ರಚಿಸಿ ಕೈ ಸುಟ್ಟುಕೊಂಡಿದ್ದರು. ನಂತರ ಕಾಂಗ್ರೆಸ್ ಜೆಡಿಎಸ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದ ನಂತರವೂ ಮೂರು ಸಲ ಆಪರೇಷನ್ ಕಮಲ ಯತ್ನ ನಡೆಸಿ ವಿಫಲಗೊಂಡಿದ್ದರು.
ಇದರ ಬೆನ್ನಲ್ಲೇ ಎದುರಾದ ಲೋಕ ಸಮರದಲ್ಲಿ ಟಾರ್ಗೆಟ್ 22 ಅಂತಾ ಹೊರಟ ಬಿಜೆಪಿ ನಿರೀಕ್ಷೆಗೂ ಮೀರಿ 25 ಸ್ಥಾನ ಗಳಿಸಿದೆ. ಟಾರ್ಗೆಟ್ ಮಿಸ್ ಆಗದಂತೆ ತಂತ್ರ ಹೆಣೆಯುವುದರಲ್ಲಿಯೂ ಯಶಸ್ವಿಯಾಗಿದೆ. ಇದರ ಹಿಂದೆ ಇದ್ದ ಹೈಕಮಾಂಡ್ ಮೊದಲು ಲೋಕ ಸಮರದಲ್ಲಿ ಟಾರ್ಗೆಟ್ ರೀಚ್ ಮಾಡಿ ನಂತರ ರಾಜ್ಯದಲ್ಲಿ ಸರ್ಕಾರ ರಚನೆ ಮಾಡುವ ಬಗ್ಗೆ ತಂತ್ರ ರೂಪಿಸೋಣ ಎನ್ನುವ ಅಭಯ ನೀಡಿತ್ತು ಎನ್ನಲಾಗಿದೆ.
ಇದೀಗ ಟಾರ್ಗೆಟ್ ರೀಚ್ ಆದ ಬೆನ್ನಲ್ಲೇ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮೋದಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಮೈತ್ರಿ ಸರ್ಕಾರದ ಪತನಕ್ಕೆ ಮುಹೂರ್ತ ಫಿಕ್ಸ್ ಆಗಲಿದೆ ಎನ್ನುವ ಮಾತುಗಳು ಕೇಸರಿ ನಾಯಕರಿಂದಲೇ ಕೇಳಿಬರುತ್ತಿದೆ. ಇದಕ್ಕೆ ನಿದರ್ಶನ ಎನ್ನುವಂತೆ ಮಾಜಿ ಡಿಸಿಎಂ ಆರ್.ಅಶೋಕ್ ಸರ್ಕಾರ ಪತನಕ್ಕೆ ಕೌಂಟ್ ಡೌನ್ ಶುರು ಎನ್ನುವ ಸುಳಿವು ನೀಡಿದ್ದಾರೆ.
ಲೋಕಸಭಾ ಚುನಾವಣೆಗೂ ಮೊದಲು ಬರೀ ಟ್ರೈಲರ್ ಬಂದಿತ್ತು ಈಗ ರಿಯಲ್ ಪಿಕ್ಚರ್ ಬರಲಿದೆ ಈಗ ಸರ್ಕಾರ ಸ್ಥಿರಗೊಳಿಸಲು ನಡೆಸುತ್ತಿರುವ ಪ್ಯಾಚ್‌ಅಪ್ ಕೆಲ ಗಂಟೆಗೆ ಮಾತ್ರ ಸೀಮಿತ. ಬಹಳ ಜನ ಈಗಾಗಲೇ ಕಿಟ್, ಬ್ಯಾಗ್, ಸೂಟ್ಕೇಸ್ ರೆಡಿ ಮಾಡಿಕೊಂಡಿದ್ದಾರೆ. ಎಲ್ಲಿಗೆ ಹೋಗಬೇಕು ಅಂತಾ ನೋಡ್ತಾ ಇದ್ದಾರೆ ಎಂದು ಆಪರೇಷನ್ ಕಮಲ ಸಾಧ್ಯತೆ ಮಾಹಿತಿ ನೀಡಿದರು.
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಏನು ಮಾಡಬೇಕೋ ಅದನ್ನ ಬಿಜೆಪಿ ಮಾಡಲಿದೆ, ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಮೋದಿ ಅಧಿಕಾರ ಸ್ವೀಕಾರ ಸಮಾರಂಭ ಮುಗಿಯಲಿ ಶುಭಕಾರ್ಯ ಮುಗಿದ ಮೇಲೆ ಈ ಕಾರ್ಯ ಆರಂಭಿಸುತ್ತೇವೆ. ಯಾವಾಗ ಏನು ಮಾಡಬೇಕು ಮಾಡುತ್ತೇವೆ, ಮೋದಿ ಪ್ರಧಾನಿಯಾಗುವುದು ನಮ್ಮ ಮೊದಲ ಅಜೆಂಡಾ ಎಂದು ಮೈತ್ರಿ ಸರ್ಕಾರ ಸದ್ಯದಲ್ಲೇ ಪತನವಾಗಲಿದೆ ಎಂದು ಅಶೋಕ್ ಸುಳಿವು ನೀಡಿದ್ದಾರೆ.
ಬಿಜೆಪಿಗೆ ಜನಾದೇಶ ಇಲ್ಲ ಎನ್ನುತ್ತಿದ್ದರು. ಆದರೆ ಈಗ ಲೋಕಸಮರದಲ್ಲಿ ಜನಾದೇಶ ಬಂದಿದೆ. ಮೈತ್ರಿ ಸರ್ಕಾರಕ್ಕೆ ಒಂದು ವರ್ಷ ಆಯಿತು ಆದರೆ ಅದರ ಸಮಾರಂಭವನ್ನೇ ಅವರು ಮಾಡಲಿಲ್ಲ ಅವರಿಗೆ ಜನಾದೇಶವಿರುವ ನಂಬಿಕೆ ಇದ್ದರೆ ಸಮಾರಂಭ ಮಾಡುತ್ತಿದ್ದರು. ಈ ರೀತಿ ಮನೆ ಸೇರಿಕೊಳ್ಳುತ್ತಿರಲಿಲ್ಲ ಎಂದು ಕುಟುಕಿದರು.
ಬಿಜೆಪಿ ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆಗೆ ಮೋದಿ ಕಾರ್ಯಕ್ರಮದ ನಂತರ ಸಮಯ ನಿಗದಿಪಡಿಸಲಾಗುತ್ತದೆ. ಆಪರೇಷನ್ ಡಜನ್ ಕಾರ್ಯಾಚರಣೆ ಹೆಸರಲ್ಲಿ ಕೈ, ದಳ ಶಾಸಕರನ್ನು ಸೆಳೆಯಲು ತಂತ್ರ ರೂಪಿಸಲಾಗುತ್ತಿದೆ. ಬಿ.ಸಿ ಪಾಟೀಲ್, ಮಹೇಶ್ ಕುಮಟಳ್ಳಿ, ಪ್ರತಾಪ್‌ಗೌಡ ಪಾಟೀಲ್, ಬಿ.ನಾಗೇಂದ್ರ, ಭೀಮಾನಾಯ್ಕ್ ಸೇರಿದಂತೆ ಹಲವರ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಒಟ್ಟಿನಲ್ಲಿ ಮೋದಿ ಪದಗ್ರಹಣ ಸಮಾರಂಭ ಮುಗಿಯುತ್ತಿದ್ದಂತೆ ಮೈತ್ರಿ ಸರ್ಕಾರಕ್ಕೆ ಗ್ರಹಣ ಹಿಡಿಯುತ್ತಾ, ಕಮಲ ಸರ್ಕಾರ ರಚನೆಗೆ ಚಾಲನೆ ಸಿಗುತ್ತಾ ಕಾದು ನೋಡಬೇಕಿದೆ.