ಬೆಂಗಳೂರು: ಎರಡು ದಿನಗಳ ಪ್ರವಾಸ ಕೈಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕೇಂದ್ರ ಗೃಹ ಸಚಿವರ ಆಗಮನದ ಹಿನ್ನೆಲೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಕೆಲ ಸಂಚಾರಿ ಬದಲಾವಣೆಗಳನ್ನ ಮಾಡಲಾಗಿದೆ.
ಬೆಳಗ್ಗೆ 11:30 ರ ಸುಮಾರಿಗೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಅಮಿತ್ ಶಾ ಆಗಮಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ, ಸಿಎಂ ಯಡಿಯೂರಪ್ಪ ಅವರು ಅಮಿತ್ ಶಾರನ್ನು ಬರಮಾಡಿಕೊಳ್ಳಲಿದ್ದಾರೆ. ನೂತನ ಸಚಿವ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಅಮಿತ್ ಶಾ ಗೆ ಭರ್ಜರಿ ಸ್ವಾಗತಕ್ಕೆ ಸಿದ್ಧತೆ ನಡೆಸಿದ್ದಾರೆ. ಸಾವಿರಾರು ಬಿಜೆಪಿ ಕಾರ್ಯಕರ್ತರು ಮಾರ್ಗ ಮಧ್ಯೆ ದೊಮ್ಮಲೂರಿನಿಂದ ಟ್ರಿನಿಟಿ ಸರ್ಕಲ್ವರೆಗೂ ಅದ್ಧೂರಿಯಾಗಿ ಸ್ವಾಗತ ಕೋರಲಿದ್ದಾರೆ.
ಅಮಿತ್ ಶಾ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ನೇರವಾಗಿ ವಿಶೇಷ ವಿಮಾನದ ಮೂಲಕ ಭದ್ರಾವತಿಗೆ ತೆರಳಲಿದ್ದಾರೆ. ಭದ್ರಾವತಿಯಲ್ಲಿನ ಕಾರ್ಯಕ್ರಮದ ನಂತರ ಮತ್ತೆ ಮಧ್ಯಾಹ್ನ 3:30 ರ ಸುಮಾರಿಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಮಧ್ಯಾಹ್ನ 4 ರ ಸುಮಾರಿಗೆ ವಿಧಾನಸೌಧಕ್ಕೆ ಭೇಟಿ ನೀಡಲಿರುವ ಅಮಿತ್ ಶಾ, ಪೊಲೀಸ್ ಗೃಹ 2020 ರ ಅಡಿಯಲ್ಲಿ ನಿರ್ಮಾಣ ಮಾಡಿರುವ ಪೊಲೀಸ್ ವಸತಿ ಗೃಹಗಳ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ಗೃಹ ಸಚಿವರು ವಿಧಾನಸೌಧಕ್ಕೆ ಭೇಟಿ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಿಧಾನಸೌಧದ ಸುತ್ತಮುತ್ತಲಿನ ಕೆಲ ರಸ್ತೆಗಳ ಸಂಚಾರಿ ಮಾರ್ಗಗಳನ್ನ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಸಂಚಾರಿ ಬದಲಾವಣೆ ಮಾರ್ಗಗಳು:
- ಕ್ವೀನ್ಸ್ ರಸ್ತೆಯಲ್ಲಿ ಸಾಗುವವರು ಸಿಟಿಒ ಸರ್ಕಲ್ ಹಾಗೂ ಕಸ್ತೂರ್ ಬಾ ರೋಡ್ ಮೂಲಕ ಸಿದ್ದಲಿಂಗಯ್ಯ ಸರ್ಕಲ್ ಕಡೆಗೆ ಸಂಚಾರ ಬದಲಾವಣೆ
- ನೃಪತುಂಗ ರಸ್ತೆ- ಪೊಲೀಸ್ ಕಾರ್ನರ್- ಕಸ್ತೂರ್ ಬಾ ರಸ್ತೆ- ಸಿದ್ದಲಿಂಗಯ್ಯ ರೋಡ್ ಮೂಲಕ ಕ್ವೀನ್ಸ್ ರಸ್ತೆ ಕಡೆಗೆ ಸಂಚಾರ ಬದಲು
- ಎಂ.ಎಸ್.ಬಿಲ್ಡಿಂಗ್ ಮಾರ್ಗವಾಗಿ ಅಂಬೇಡ್ಕರ್ ಬೀದಿ ತಲುಪುವವರು ಸಿಐಡಿ ರಸ್ತೆಯಲ್ಲಿ ಬಲತಿರುವು ಪಡೆದು ಪ್ಯಾಲೆಸ್ ರೋಡ್ ಮೂಲಕ ಸಂಚಾರಕ್ಕೆ ಅನುವು
ಇಂದು ವಿಧಾನಸೌಧದಲ್ಲಿ ಕೆಲ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿ ನಂತರ ಸಂಜೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ. ನಂತರ ಬಿಜೆಪಿ ಹಿರಿಯ ನಾಯಕರುಗಳ ಜೊತೆ ಶಾ ರಾಜ್ಯ ರಾಜಕಾರಣದ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಸಂಪುಟ ವಿಸ್ತರಣೆ ವೇಳೆಯಲ್ಲಿನ ಕೆಲ ಗೊಂದಲಗಳು ಹಾಗೂ ಕೆಲ ಶಾಸಕರ ಬಂಡಾಯವನ್ನ ಅಮಿತ್ ಶಾ ಶಮನ ಮಾಡಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.
ಇದನ್ನೂ ಓದಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಕ್ಕೆ ಸಕಲ ಸಿದ್ಧತೆ... ‘ಚಾಣಕ್ಯ’ನಿಂದ ಶಮನವಾಗುತ್ತಾ ಶಾಸಕರ ಅಸಮಾಧಾನ!?