ಬೆಂಗಳೂರು: 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ನಗರದ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದಾರೆ.
ಮೈದಾನದ ಸುತ್ತಲು ಖಾಕಿ ಕಣ್ಗಾವಲು ಇರಿಸಲಾಗಿದೆ. ಭದ್ರತೆಗಾಗಿ ಒಟ್ಟು 1,500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸ್ ಕಮಿಷನರ್ ಕಮಲ್ ಪಂತ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು ಹಾಗೂ ಇಬ್ಬರು ಜಂಟಿ ಪೊಲೀಸ್ ಆಯುಕ್ತರು ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ. ಸ್ಥಳದಲ್ಲಿ 10 ಜನ ಡಿಸಿಪಿಗಳು, 15 ಕೆಎಸ್ಆರ್ಪಿ ತುಕಡಿ, 10 ನಗರ ಸಶಸ್ತ್ರ ಪಡೆ ಹಾಗೂ ಎರಡು ಕಮಾಂಡ್ ಟೀಂ ನಿಯೋಜಿಸಲಾಗಿದೆ.
ಇಂದು ಬೆಳಗ್ಗೆ 9 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಧ್ವಜಾರೋಹಣ ಮಾಡಲಿದ್ದಾರೆ. ಆಹ್ವಾನಿತರಿಗೆ ಅಷ್ಟೇ ಕಾರ್ಯಕ್ರಮದಲ್ಲಿ ಭಾಗವಹಿಸಲು ಆವಕಾಶ ಕಲ್ಪಿಸಲಾಗಿದೆ. ಸೂಕ್ತ ಭದ್ರತೆ ನೀಡುವ ಉದ್ದೇಶದಿಂದ 50 ಕ್ಕೂ ಹೆಚ್ಚು ಸಿಸಿಟಿವಿ, ಸ್ಕಾನ್ಯರ್ ಬಳಸಲಾಗುತ್ತಿದೆ. ಸಿಗರೇಟ್, ಬೆಂಕಿಪಟ್ಟಣ, ಲೈಟರ್, ಚಾಕು ನಿಷೇಧಿಸಲಾಗಿದೆ.
ಕಾರ್ಯಕ್ರಮದ ವೇಳೆ ಮಾಣಿಕ್ ಷಾ ಗ್ರೌಂಡ್ ಬಳಿ ಮಾರ್ಗ ಬದಲಾವಣೆಯಾಗಲಿದೆ. ವಿವಿಧ ಮುಖ್ಯ ರಸ್ತೆಗಳ ಬದಲು, ಬದಲಿ ಮಾರ್ಗದ ಮೂಲಕ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.