ಬೆಂಗಳೂರು: ಕೋವಿಡ್-19 ವೈರಸ್ ಭೀತಿಯ ಪರಿಣಾಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು ₹8.40 ಕೋಟಿ ನಷ್ಟವಾಗಿದೆ. ಇಂದೂ ಕೂಡಾ ಒಟ್ಟು 1300 ಬಸ್‌ಗಳನ್ನು ರದ್ದು ಮಾಡಲಾಗಿದೆ.
ಶಿವಮೊಗ್ಗ ಮತ್ತು ಹಾಸನ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳ ಸಹಯೋಗದೊಂದಿಗೆ ಸ್ಕ್ರೀನಿಂಗ್ ಮಾಡಲಾಯಿತು. ಮಾರ್ಚ್ 15ರಂದು ರಾಜಹಂಸ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಕಂಡು ಬಂದ ಹಿನ್ನೆಲೆ ಸದರಿ ಬಸ್ಸಿನ ಚಾಲಕ/ನಿರ್ವಾಹಕರನ್ನು ಹಾಗೂ ಅವರ ಪರಿವಾರದವರನ್ನು ತಪಾಸಣೆ ಮಾಡಿಸುವ ವ್ಯವಸ್ಥೆ ಮಾಡಲಾಗಿದೆ.
ಬಸ್ನಲ್ಲಿ ಒಟ್ಟು 38 ಪ್ರಯಾಣಿಕರಿದ್ದು, 33 ಜನ ನಿರ್ವಾಹಕನಿಂದ ಟಿಕೆಟ್ ಪಡೆದು ಪ್ರಯಾಣಿಸಿದ್ದಾರೆ. 5 ಜನ ಮುಂಗಡ ಟಿಕೆಟ್ ಕಾಯ್ದಿರಿಸಿದ್ದರು. ಇವರಿಗೆ ಫೋನ್ ಮೂಲಕ ಸಂಪರ್ಕಿಸಿ ಕೂಡಲೇ ಆಸ್ಪತೆಗೆ ತಪಾಸಣೆಗೆ ತೆರಳಲು ಕೋರಲಾಗಿದೆ ಎಂದು ನಿಗಮ ತಿಳಿಸಿದೆ. ಮಂಗಳೂರು ಜಿಲ್ಲಾಡಳಿತವು ನಿಗಮದ 5 ಬಸ್‌ಗಳನ್ನು ಪಡೆದು, ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರನ್ನು ಸ್ಥಳಾಂತರಿಸುವ ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದೆ.