ಬೆಂಗಳೂರು: ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಚಾಕು ಇರಿತಕ್ಕೊಳಗಾಗಿ ಇಂದಿಗೆ ಮೂರು ವರ್ಷವಾಗಿದೆ. ಭದ್ರತಾ ಲೋಪದಿಂದ ದುರ್ಘಟನೆಗೆ ಕಾರಣವಾಗಿತ್ತು. ಘಟನೆ ಬಳಿಕ ಲೋಕಾಯುಕ್ತ ಸಂಸ್ಥೆಗೆ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಲೋಕಾಯುಕ್ತರ ಮೇಲೆ ಮಾರಣಾಂತಿಕ ಹಲ್ಲೆ ರಾಜ್ಯದ ನ್ಯಾಯಾಂಗ ಇತಿಹಾಸದಲ್ಲೇ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. ಭ್ರಷ್ಟರ ಪಾಲಿಗೆ ಸಿಂಹಸ್ವಪ್ನರಾದ ಲೋಕಾಯುಕ್ತ ಸಂಸ್ಥೆಯ ಕಚೇರಿಗೆ ದೂರುದಾರನ ಸೋಗಿನಲ್ಲಿ ತೇಜಸ್ ಶರ್ಮಾ ಎಂಬಾತ ಒಳಹೋಗಿ ಏಕಾಏಕಿ ನ್ಯಾ.ವಿಶ್ವನಾಥ್ ಶೆಟ್ಟಿ ಅವರ ಹೊಟ್ಟೆಗೆ ಚಾಕುವಿನಿಂದ ತಿವಿದು ಮಾರಣಾಂತಿಕ ಹಲ್ಲೆಗೆ ಕಾರಣನಾಗಿದ್ದ. ಘಟನೆ ಬೆನ್ನಲ್ಲೇ ರೆಡ್ ಹ್ಯಾಂಡಾಗಿ ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈ ಘಟನೆ ರಾಷ್ಟ್ರ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣಕ್ಕೆ ಮೂರು ವರ್ಷವಾಗಿದ್ದು, ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ವಿಚಾರಣೆ ನ್ಯಾಯಾಲಯ ಹಂತದಲ್ಲಿದೆ. ಘಟನೆ ಹಿನ್ನೆಲೆ ರಾಜ್ಯ ಸರ್ಕಾರ ಸಂಸ್ಥೆಗೆ ಸೂಕ್ತ ಭದ್ರತೆ ಒದಗಿಸಿತ್ತು.
ಘಟನೆಗೂ ಮುನ್ನ ಲೋಕಾಯುಕ್ತ ಸಂಸ್ಥೆ ಪ್ರವೇಶಾರಂಭದಲ್ಲಿ ಭದ್ರತೆಗೆ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿರಲಿಲ್ಲ. ಲೋಹ ಪರಿಶೋಧಕ ಯಂತ್ರ ದುರಸ್ತಿ ಬಗ್ಗೆ ಲೋಕಾಯುಕ್ತ ರಿಜಿಸ್ಟ್ರಾರ್ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸುಲಭವಾಗಿ ಲೋಕಾಯುಕ್ತ ಕಚೇರಿಗೆ ಬಂದು ನೇರವಾಗಿ ಲೋಕಾಯುಕ್ತರನ್ನ ಭೇಟಿ ಮಾಡುವುದು ಸುಗಮವಾಗಿತ್ತು. ಅಲ್ಲದೆ ಕಚೇರಿಯ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿಯ ಕೊರತೆ, ಸಿಸಿ ಕ್ಯಾಮರಾಗಳು ಕಾರ್ಯ ನಿರ್ವಹಿಸದೆ ಕೆಟ್ಟು ಹೋಗಿರುವುದು, ನೋಂದಣಿ ಪುಸ್ತಕ ನಿರ್ವಹಣೆ ಮಾಡದೆ ಇರುವುದು ಸೇರಿದಂತೆ ಹತ್ತು ಹಲವು ಲೋಪದೋಷಗಳು ಇದ್ದವು. ಈ ಘಟನೆ ಬಳಿಕ ಪ್ರವೇಶದ್ವಾರದಲ್ಲಿ ಅಗತ್ಯನುಗುಣವಾಗಿ ಪೊಲೀಸರನ್ನ ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಮಾರು 12ಕ್ಕೂ ಹೆಚ್ಚು ಪೊಲೀಸರು ಕಾವಲು ಕಾಯುತ್ತಿದ್ದು, ಪಾಳಿಯಲ್ಲಿ ಭದ್ರತೆ ನೀಡಲಿದ್ದಾರೆ.
ಕಚೇರಿಯ ಆರಂಭದಲ್ಲಿ ಲೋಹ ಪರಿಶೋಧಕ ಯಂತ್ರ, ಹಾಗೂ ಸ್ಕ್ಯಾನಿಂಗ್ ಯಂತ್ರ ಅಳವಡಿಸಲಾಗಿದೆ. ಪ್ರತಿಯೊಬ್ಬರನ್ನು ತಪಾಸಣೆ ಒಳಪಡಿಸಲಾಗುತ್ತದೆ. ಬ್ಯಾಗ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸ್ಕ್ಯಾನಿಂಗ್ ಗೆ ಒಳಪಡಿಸಲಾಗುತ್ತಿದೆ. ಸ್ವಾಗತಕಾರರ ಬಳಿ ಕಚೇರಿಗೆ ಬಂದಿರುವ ಉದ್ದೇಶ, ಯಾರನ್ನು ಭೇಟಿ ಮಾಡಬೇಕು ಎಂಬುದರ ಬಗ್ಗೆ ತಿಳಿಸಿ ಹೆಸರು ಹಾಗೂ ಫೋನ್ ನಂಬರ್ ದಾಖಲಿಸಿಕೊಳ್ಳಬೇಕು. ಅನಂತರ ಪೊಲೀಸ್ ಸಿಬ್ಬಂದಿಯು ಹ್ಯಾಂಡ್ ಮೆಟಲ್ ಡಿಟೆಕ್ಟರ್ ನಿಂದ ತಪಾಸಣೆ ಮಾಡಿಸಿಕೊಂಡ ಬಳಿಕವಷ್ಟೇ ಒಳ ಹೋಗಲು ಅವಕಾಶವಿದೆ.
ಓದಿ : ಬೆಂಗಳೂರಲ್ಲಿ ರೌಡಿಶೀಟರ್ ಚಡ್ಡಿ ಕಿರಣ್ ಕಾಲಿಗೆ ಗುಂಡೇಟು: ನಟೋರಿಯಸ್ ರೌಡಿ ಶೀಟರ್ ಬಂಧನ
ಮೊದಲ ಮಹಡಿಯಲ್ಲಿರುವ ಲೋಕಾಯುಕ್ತ ಚೇಂಬರ್ ಬಳಿ ಲೋಹ ಪರಿಶೋಧಕ ಯಂತ್ರ ಅಳವಡಿಸಲಾಗಿದೆ. ಅಲ್ಲಿನ ಭದ್ರತಾ ಸಿಬ್ಬಂದಿ ಮತ್ತೊಮ್ಮೆತಪಾಸಣೆ ನಡೆಸಲಿದ್ದಾರೆ. ಇದಾದ ಬಳಿಕ ಲೋಕಾಯುಕ್ತರು ಅನುಮತಿ ನೀಡಿದ ಬಳಿಕವಷ್ಟೇ ಭೇಟಿಯಾಗಲು ಅವಕಾಶ ನೀಡಲಾಗುತ್ತದೆ. ದೂರುದಾರರು ಚೇಂಬರ್ ಒಳಗಡೆ ಇರುವಾಗಲೂ ಮುಂಜಾಗ್ರತ ಕ್ರಮವಾಗಿ ಗನ್ ಮ್ಯಾನ್ ಸಹ ಒಳಗೆ ಇರಲಿದ್ದಾರೆ. ಅಲ್ಲದೆ ಸೂಕ್ತ ಕಚೇರಿಯ ಹೊರಗೆ ಹಾಗೂ ಒಳಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟಾರೆ ಲೋಕಾಯುಕ್ತ ಮೇಲಿನ ಹಲ್ಲೆ ಬಳಿಕ ರಾಜ್ಯ ಸರ್ಕಾರ ಸೂಕ್ತ ಭದ್ರತೆ ಕಲ್ಪಿಸಿದೆ.
ತೇಜಸ್ ಶರ್ಮಾ ಯಾರು..? : ರಾಜಸ್ಥಾನ ಮೂಲದ ತುಮಕೂರಿನ ನಿವಾಸಿಯಾಗಿದ್ದ ತೇಜಸ್ ಶರ್ಮಾ ವೃತ್ತಿಯಲ್ಲಿ ಪೀಠೋಪಕರಣ ಮಾರಾಟ ಅಂಗಡಿ ಮಾಲೀಕನಾಗಿದ್ದ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಪೀಠೋಪಕರಣ ತಯಾರಿಸಿ ಪೂರೈಸುವ ಗುತ್ತಿಗೆದಾರನಾಗಿದ್ದ. ಇದೇ ರೀತಿ 2013 ರಲ್ಲಿ ಸರ್ಕಾರಿ ಶಾಲೆಯೊಂದರ ಪೀಠೋಪಕರಣ ಹಾಗೂ ಡೆಸ್ಕ್ ಒದಗಿಸುವ ಗುತ್ತಿಗೆ ಪಡೆದಿದ್ದ. ಆದರೆ ಶಾಲೆಯ ಪ್ರಾಂಶುಪಾಲ ತೇಜಸ್ ಶರ್ಮಾನಿಗೆ ನೀಡಬೇಕಾದ ಹಣವನ್ನು ಬಹುತೇಕ ಜೇಬಿಗಿಳಿಸಿಕೊಳ್ಳುತ್ತಿದ್ದ ಎಂಬ ಆರೋಪ ಹೊತ್ತುಕೊಂಡು ಲೋಕಾಯುಕ್ತ ಕಚೇರಿಗೆ ದೂರ ನೀಡಿದ್ದ. ದೂರು ನೀಡಿ ಹಲವು ವರ್ಷಗಳಾದರೂ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡು 2018 ಮಾ.7 ರಂದು ಮಧ್ಯಾಹ್ನ ದೂರುದಾರನ ಸೋಗಿನಲ್ಲಿ ಚೇಂಬರ್ ಗೆ ಹೋಗಿ ಚಾಕುವಿನಿಂದ ಲೋಕಾಯುಕ್ತರ ಹೊಟ್ಟೆ, ಎದೆಯ ಮಧ್ಯ ಭಾಗಕ್ಕೆ ಇರಿದಿದ್ದ. ಸದ್ಯ ಘಟನೆ ಸಂಬಂಧ ಆರೋಪಿ ಜಾಮೀನು ಸಿಗದೆ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಈ ಘಟನೆ ಬಗ್ಗೆ ಲೋಕಾಯುಕ್ತರು ಹೇಳೋದೇನು..? : ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣ ನ್ಯಾಯಾಲಯದಲ್ಲಿದೆ. ಘಟನೆ ಕುರಿತು ನ್ಯಾಯಾಲಯದಲ್ಲಿ ನನ್ನ ಹೇಳಿಕೆ ಕೊಟ್ಟಿದ್ದೇನೆ. ಇದೇ ತಿಂಗಳು 18ರಂದು ವಿಚಾರಣೆ ನಡೆಯಲಿದೆ. ಘಟನೆ ಬಳಿಕ ಸರ್ಕಾರ ಲೋಕಾಯುಕ್ತ ಕಚೇರಿಗೆ ಭದ್ರತೆ ಹೆಚ್ಚಿಸಲಾಗಿದೆ. ಅಂದು ಭದ್ರತಾ ಲೋಪದಿಂದ ಘಟನೆ ನಡೆದಿಲ್ಲ. ನನ್ನ ತಪ್ಪಿನಿಂದ ನನ್ನ ಮೇಲೆ ಹಲ್ಲೆಯಾಗಿತ್ತು. ಸದ್ಯ ಸರ್ಕಾರವು ನನಗೆ ಹಾಗೂ ಕಚೇರಿಗೆ ಭದ್ರತೆ ನೀಡಿದೆ ಎಂದಿದ್ದಾರೆ.