ಬೆಂಗಳೂರು: ಕಳೆದ ನಾಲ್ಕು ವರ್ಷಗಳ ಹಿಂದೆ 155ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ ಕುಖ್ಯಾತ ಸರಗಳ್ಳ ಮತ್ತೆ ಹಳೇ ಚಾಳಿ ಮುಂದುವರೆಸಿದ್ದಾನೆ. ಜಾಮೀನಿನ ಮೇಲೆ ಹೊರಬಂದರೂ ಸರಗಳ್ಳತನ ಮಾಡುತ್ತಿದ್ದ ನಟೋರಿಯಸ್ ಸೇರಿ ಮೂವರನ್ನು ಬಾಗಲಗುಂಟೆ ಪೊಲೀಸರು ಜೈಲಿಗಟ್ಟಿದ್ದಾರೆ.
ಅಚ್ಯುತ್, ಸಿದ್ದರಾಜು ಹಾಗೂ ಪ್ರವೀಣ್ ಎಂಬ ಬಂಧಿತ ಆರೋಪಿಗಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಚ್ಯುತ್ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸರಗಳ್ಳತನ ಕೃತ್ಯವೆಸಗಿದ್ದ. ಈತನ ವಿರುದ್ಧ 155ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳಿವೆ.
ಕಳೆದ ನಾಲ್ಕು ವರ್ಷಗಳ ಹಿಂದೆ ಜ್ಣಾನಭಾರತಿ ಠಾಣೆ ಪೊಲೀಸರಿಂದ ಗುಂಡೇಟು ತಿಂದು ಪರಪ್ಪನ ಅಗ್ರಹಾರ ಜೈಲು ಸೇರಿದ್ದ. ಹಣಕ್ಕಾಗಿ ಅಚ್ಯುತ್ ಇಬ್ಬರು ಸಹಚರರ ಜೊತೆಗೂಡಿ ಬೈಕ್ ಹಾಗೂ ಸರಗಳ್ಳತನ ಮಾಡಿದ್ದ. ಈ ಮೂವರೂ ಆರೋಪಿಗಳನ್ನು ಬಂಧಿಸಿರುವುದಾಗಿ ನಗರ ಉತ್ತರ ವಿಭಾಗ ಡಿಸಿಪಿ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.
ಹಣಕ್ಕಾಗಿ ಜೈಲಿನಲ್ಲಿ ಸ್ಕೆಚ್: ಬಂಧಿತ ಆರೋಪಿಯಾದ ಸಿದ್ದರಾಜು ಹಾಗೂ ಪ್ರಸನ್ನ ಕಳ್ಳತನ ಹಾಗೂ ಆತ್ಯಾಚಾರ ಕೃತ್ಯಗಳಲ್ಲಿ ಭಾಗಿಯಾಗಿ ಜೈಲು ಸೇರಿದರೆ, ನಟೋರಿಯಸ್ ಖದೀಮ ಅಚ್ಯುತ್ ಸರಗಳ್ಳತನವೆಸಗಿ ಸೆರೆಮನೆ ಪಾಲಾಗಿದ್ದ. ಜೈಲಿನಲ್ಲಿದ್ದಾಗ ಅಚ್ಯುತ್, ಸಿದ್ದರಾಜು ಹಾಗೂ ಪ್ರಸನ್ನ ಎಂಬುವರನ್ನು ಪರಿಚಯಿಸಿಕೊಂಡಿದ್ದಾನೆ. ತನ್ನ ಇಬ್ಬರು ಸಹಚರರಿಗೆ ಬೈಕ್ ಕಳ್ಳತನ ಮಾಡಿದರೆ ತಾನು ಸರಗಳ್ಳತನ ಮಾಡಿ ಸುಲಭವಾಗಿ ಹಣ ಗಳಿಸಬಹುದು ಪ್ಲಾನ್ ರೂಪಿಸಿದ್ದ.
ಇದರಂತೆ ಕೆಲ ತಿಂಗಳ ಹಿಂದೆ ಮೂವರು ಖದೀಮರು ಜಾಮೀನು ಪಡೆದು ಹೊರಬಂದಿದ್ದಾರೆ. ಪೊಲೀಸರಿಗೆ ಸುಲಭವಾಗಿ ಸಿಗಬಾರದೆಂಬ ಉದ್ದೇಶದಿಂದ ರಾತ್ರಿ ವೇಳೆ ಸರಗಳ್ಳತನ ಮಾಡಲು ಯೋಜನೆ ರೂಪಿಸಿದ್ದರು. ಇದರಂತೆ ಇದೇ ತಿಂಗಳು 10ರಂದು ಟಿ.ದಾಸರಹಳ್ಳಿಯಲ್ಲಿ ವಾಯುವಿಹಾರಕ್ಕೆ ಹೋಗುತ್ತಿದ್ದ ಮಹಿಳೆಯನ್ನು ಗುರಿಯಾಗಿಸಿ ಸರಗಳ್ಳತನ ಮಾಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬಾಗಲಗುಂಟೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ ನೆಲಮಂಗಲ, ನಂದಿನಿ ಲೇಔಟ್ ಹಾಗೂ ಬಾಗಲಗುಂಟೆ ಪೊಲೀಸ್ ಠಾಣೆಗಳಲ್ಲಿ ಮೂವರು ಪ್ರಕರಣ ಭೇದಿಸಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಇದನ್ನೂ ಓದಿ: ಪ್ರಿಯತಮೆ ಅಫೇರ್ಗೆ ಕೋಪಗೊಂಡ ವೈದ್ಯ: ಪ್ಲಾನ್ನಂತೆ ಕರೆದು ಪ್ರಿಯಕರನ ಕೊಂದ ಮಾಯಗಾತಿ