ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ಮೂವರು ವಿದ್ಯಾರ್ಥಿಗಳು ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗುವ ಮೂಲಕ ಕೆಲ ವಿದ್ಯಾರ್ಥಿಗಳು ಉದ್ಧಟತನ ಮೆರೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರು ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿ ಅಮಾನತು ಮಾಡಿದ್ದು, ಘಟನೆ ಬಗ್ಗೆ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ 153 - ಜನಾಂಗೀಯ ದ್ವೇಷಕ್ಕೆ ಪ್ರಚೋದನೆ ಹಾಗೂ 505(1)B - ದೇಶದ ವಿರುದ್ಧ ಕೆಲಸ ಮಾಡಲು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಘೋಷಣೆ ಕೂಗುವ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಮೂವರನ್ನು ಸಸ್ಪೆಂಡ್ ಮಾಡಿದ್ದ ಕಾಲೇಜು ಆಡಳಿತ ಮಂಡಳಿ, ಬಳಿಕ ಮಾರತ್ತಹಳ್ಳಿ ಠಾಣೆಗೆ ದೂರು ನೀಡಿತ್ತು.
ಕೂಡಲೇ ಮೂವರನ್ನೂ ವಶಕ್ಕೆ ಪಡೆದಿದ್ದ ಮಾರತ್ತಹಳ್ಳಿ ಪೊಲೀಸರು ತಡರಾತ್ರಿಯವರೆಗೂ ವಿಚಾರಣೆ ಕೈಗೊಂಡಿದ್ದಾರೆ. ತನಿಖೆ ವೇಳೆ ಆರೋಪಿಗಳು ಉದ್ದೇಶಪೂರ್ವಕವಾಗಿ ಘೋಷಣೆ ಕೂಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಸದ್ಯ ವಿದ್ಯಾರ್ಥಿಗಳ ಮೊಬೈಲ್ ವಶಕ್ಕೆ ಪಡೆದು ಕಳಿಸಿದ್ದ ಮಾರತ್ತಹಳ್ಳಿ ಪೊಲೀಸರು ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಹಿನ್ನೆಲೆ: ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ವೀಕ್ಷಿಸಲು ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದರು. ಎಲ್ಲರಂತೆ ಕಾರ್ಯಕ್ರಮ ವೀಕ್ಷಿಸಲೆಂದು ಬಂದಿದ್ದವರಲ್ಲಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಾರೆ. ಈ ಮೂವರು ವಿದ್ಯಾರ್ಥಿಗಳ ಪೈಕಿ, ವಿದ್ಯಾರ್ಥಿನಿ ಹಾಗೂ ಓರ್ವ ವಿದ್ಯಾರ್ಥಿ ತಮಾಷೆಗಾಗಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿರುವುದಾಗಿ ಹೇಳಿದ್ದಾರೆ. ಇದನ್ನು ಮತ್ತೋರ್ವ ವಿದ್ಯಾರ್ಥಿ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಈ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಸ್ಥಳೀಯರು ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ವಿದ್ಯಾರ್ಥಿಗಳು ತಾವು ಘೋಷಣೆ ಕೂಗಿರುವುದಕ್ಕೆ ಕ್ಷಮೆ ಕೇಳಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವ್ಯಕ್ತಿಯ ಬಂಧನ