ಬೆಂಗಳೂರು: ಕಾರಾಗೃಹದಲ್ಲಿ ಸ್ನೇಹಿತರಾಗಿ ಬಳಿಕ ಬಿಡುಗಡೆಯಾದ ನಂತರ ಒಟ್ಟಾಗಿ ಮನೆಗಳ್ಳತನ ಮಾಡುತ್ತಿದ್ದ, ಮೂವರನ್ನು ಮಾಗಡಿ ರಸ್ತೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಇವರಿಂದ 16.65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆಂಧ್ರಪ್ರದೇಶ ಮೂಲದವರಾದ ವೆಂಕಟರಮಣ, ಕೃಷ್ಣಮೂರ್ತಿ ಹಾಗೂ ಬಾಗೇಪಲ್ಲಿ ಮೂಲದ ರಮೇಶ್ ಬಂಧಿತರು. ಅಕ್ಟೋಬರ್ 11 ರಂದು ದೂರುದಾರರೊಬ್ಬರು ಸ್ನಾನಕ್ಕೆ ಹೋಗುವ ಮೊದಲು ಬಿಚ್ಚಿಟ್ಟಿದ ಚಿನ್ನ ಕಳ್ಳತನವಾಗಿದೆ ಎಂದು ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಕಳ್ಳರು ಮನೆಯೊಳಗೇ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಸರ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ, ಮನೆ ಕಳ್ಳತನ ಮಾಡಿರುವ ಕುರಿತು ಬಾಯ್ಬಿಟ್ಟಿದ್ದಾರೆ.
ಈ ಮೂವರು ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಜೈಲಿಗೆ ಹೋಗಿದ್ದಾಗ, ಅಲ್ಲಿಯೇ ಪರಿಚಯವಾಗಿ ಸ್ನೇಹಿತರಾಗಿದ್ದಾರೆ. ಆರೋಪಿಗಳು ಒಟ್ಟಾಗಿ ಜೈಲಿನಿಂದ ಹೊರಬಂದ ನಂತರ ಬೈಕಿನಲ್ಲಿ ವಿವಿಧ ಬಡಾವಣೆಗಳನ್ನು ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿಯ ವೇಳೆ ಕನ್ನ ಹಾಕಲು ಸಂಚು ರೂಪಿಸುತ್ತಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಆಟೋಚಾಲಕನ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಇಬ್ಬರು ಮನೆ ಬೀಗ ಒಡೆದು ಕಳ್ಳತನ ಮಾಡುತ್ತಿದ್ದರೆ, ಮತ್ತೊಬ್ಬ ಕಾವಲು ನಿಂತು ಯಾರಾದರೂ ಬಂದರೆ ಸುಳಿವು ನೀಡುತ್ತಿದ್ದನು. ಈ ರೀತಿಯಲ್ಲೇ ಹಲವು ಮನೆಗಳವು ಮಾಡಿದ್ದಾರೆ. ಈ ಆರೋಪಿಗಳು ಚಿನ್ನದ ಆಭರಣ ಮತ್ತು ಹಣ ಮಾತ್ರ ದೋಚಿ ಎಸ್ಕೇಪ್ ಆಗುತ್ತಿದ್ದರು. ಬೆಳ್ಳಿ ವಸ್ತುಗಳನ್ನು ಮತ್ತು ಇತರ ವಸ್ತುಗಳನ್ನು ಮುಟ್ಟುತ್ತಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಆರೋಪಿಗಳ ಬಂಧನದಿಂದ ಮಾಗಡಿ ರಸ್ತೆ ಪೊಲೀಸ್ ಠಾಣೆಯ 4 ಪ್ರಕರಣ, ವಿಜಯನಗರ ಠಾಣೆಯ 2 ಪ್ರಕರಣ, ಅಗ್ರಹಾರ ಮತ್ತು ಚನ್ನಪಟ್ಟಣದ ತಲಾ ಒಂದು ಮನೆಗಳಿವು ಪ್ರಕರಣ ಸೇರಿದಂತೆ ಒಟ್ಟು 8 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೂ ಹತ್ತು ಹಲವು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ಮುಂದುವರೆದಿದೆ ಎಂದು ಪೂರ್ವ ವಿಭಾಗದ ಡಿ.ಸಿ.ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.