ಬೆಂಗಳೂರು: ನಗರ ಮತ್ತು ತಮಿಳುನಾಡಿನಲ್ಲಿ ಕಳ್ಳತನ ಮಾಡಿ ಪೊಲೀಸರಿಗೆ ತಲೆನೋವಾಗಿದ್ದ ಇಬ್ಬರು ಕಳ್ಳ ಸಹೋದರರು ಸೇರಿ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರು ಬಂಧಿಸಿದ್ದಾರೆ. ಗುಣಶೇಖರ್ ಅಲಿಯಾಸ್ ಕೊರಂಗು, ಅಜಿತ್ ಹಾಗೂ ಮುತ್ತುಕುಮಾರ್ ಬಂಧಿತರು.
ಆರೋಪಿಗಳು ಬೀಗ ಹಾಕಿದ ಮನೆಗಳನ್ನು ದೂರದಿಂದಲೇ ಅನೇಕ ದಿನಗಳ ಕಾಲ ನೋಡಿ ಕಳ್ಳತನ ಮಾಡುತ್ತಿದ್ದರು. ಕದ್ದ ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಿ ಐಷಾರಾಮಿ ಜೀವನ ನಡೆಸಲು ಹಾಗೂ ಮಾದಕ ವಸ್ತು ಸೇವೆನೆಗೆ ಹಣ ವ್ಯಯಿಸುತ್ತಿದ್ದರು.
ಆರೋಪಿ ಗುಣಶೇಖರ್ ಬಾಲ್ಯದಿಂದಲೇ ಕಳ್ಳತನಕ್ಕೆ ಮಾಡುವ ಚಾಳಿಗೆ ಇಳಿದಿದ್ದ. ತಮಿಳುನಾಡಿನಲ್ಲಿ ಕೋಳಿ ಜೂಜಾಡಲು ಕಳ್ಳತನದ ಹಣ ಬಳಕೆ ಮಾಡುತ್ತಿದ್ದ. ಹೀಗೆ ಈ ಕಳ್ಳ ಸಹೋದರರು ಸಿಲಿಕಾನ್ ಸಿಟಿಯ ಹೆಣ್ಣೂರು, ಕೊತ್ತನೂರಿನಲ್ಲಿ ಮನೆಯ ಬಾಲ್ಕನಿ ಸ್ಲೈಡಿಂಗ್ ಡೋರ್ ಬ್ರೇಕ್ ಮಾಡಿ ಚಿನ್ನಾಭರಣ ದೋಚಿದ್ದರು.
ಪೊಲೀಸರು ಮೊಬೈಲ್ ನಂಬರ್ ಟ್ರ್ಯಾಪ್ ಮಾಡಬಾರದು ಅಂತಾ ವಾಟ್ಸ್ ಆ್ಯಪ್ ಕರೆ ಮಾಡುತ್ತಿದ್ದರು. ಬೆಂಗಳೂರಿನಲ್ಲಿ ಕದ್ದ ಚಿನ್ನಾಭರಣ ತಮಿಳುನಾಡಿನಲ್ಲಿ ಮಾರಾಟ ಮಾಡಿದ್ದರು. ಈ ಹಿಂದೆಯೂ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬೇಲ್ ಪಡೆದು ಬಂದು ಮತ್ತದೇ ಪ್ರವೃತ್ತಿ ಮುಂದುವರೆಸಿದ್ದರು.
ಸದ್ಯ ಹೆಣ್ಣೂರು ಪೊಲೀಸರು ಫಿಂಗರ್ ಪ್ರಿಂಟ್ ಆಧಾರದಲ್ಲಿ ಕಳ್ಳರನ್ನು ಬಂಧಿಸಿ 49 ಲಕ್ಷ ಮೌಲ್ಯದ 1.1 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಆರೋಪಗಳ ಮೇಲೆ ಒಟ್ಟು ಹದಿನಾಲ್ಕು ಪ್ರಕರಣಗಳಿರುವ ಅಂಶ ಬೆಳಕಿಗೆ ಬಂದಿದೆ. ಮಕ್ಕಳ ಕಳ್ಳತನ ವೃತ್ತಿಗೆ ಪೋಷಕರು ಸಾಥ್ ಕೊಡುತ್ತಿದ್ದರು ಎಂಬುದು ಸಹ ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ತಿಳಿಸಿದ್ದಾರೆ.
ಇದನ್ನೂ ಓದಿ : 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್ ದಂಪತಿ