ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಬಳಿ ಕಾರು ಚಾಲಕನೊಬ್ಬ ನಿಯಂತ್ರಣ ತಪ್ಪಿ ಸರಣಿ ಅಪಘಾತ ಎಸಗಿದ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯಲ್ಲಿ ಒಡಿಶಾ ಮೂಲದ ಸ್ಮಿತಾ, ಕಿರಣ್, ಮೊಯ್ಸಿನ್ ಎಂಬುವರು ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳ ಪೈಕಿ ಸ್ಮಿತಾಗೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಘಟನೆಯಲ್ಲಿ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ.
ಘಟನೆ ಸಂಬಂಧ ಕಾರು ಚಾಲಕ ಬನ್ನೇರುಘಟ್ಟ ರಸ್ತೆ ನಿವಾಸಿ ಅಗರ್ವಾಲ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ. ಕಾರು ಚಾಲಕ ಅಗರ್ವಾಲ್ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಜಿಗಣಿ ಕಡೆಯಿಂದ ನಗರದ ಕಡೆಗೆ ಬನ್ನೇರುಘಟ್ಟ ರಸ್ತೆಯ ಕಾಳೇನ ಅಗ್ರಹಾರದ ಬಳಿ ಬರುತ್ತಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬರು ಏಕಾಏಕಿ ಅಡ್ಡಬಂದಿದ್ದಾರೆ. ಈ ವೇಳೆ ದಿಢೀರ್ ಬ್ರೇಕ್ ಹಾಕುವ ಭರದಲ್ಲಿ ಎಕ್ಸಲೇಟರ್ ತುಳಿದಿದ್ದಾನೆ. ಪರಿಣಾಮ ವೇಗ ಹೆಚ್ಚಾದ ಕಾರು ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದು, ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ನಿಂತಿದೆ.
ಈ ಸರಣಿ ಅಪಘಾತದಲ್ಲಿ ಪತಿಯ ಜತೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸ್ಮಿತಾಗೆ ಗಂಭೀರ ಗಾಯವಾಗಿದೆ. ಉಳಿದ ಎರಡು ದ್ವಿಚಕ್ರ ವಾಹನಗಳ ಸವಾರರಾದ ಕಿರಣ್ ಮತ್ತು ಮೊಯ್ಸಿನ್‌ಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಹುಳಿಮಾವು ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಕಾರಿಗೆ ಲಾರಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು: ಇತ್ತೀಚಿಗೆ, ನಿಂತಿದ್ದ ಕ್ರೂಸರ್ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ತುಮಕೂರಿನ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಡೆದಿತ್ತು. ಕ್ರೂಸರ್ ಚಾಲಕ ಶಂಕರ್ (35), ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ (40) ಮೃತರು. ಅಪಘಾತದಲ್ಲಿ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯ ಆಗಿದ್ದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮೃತರು ಗಂಗಾವತಿ ಮೂಲದವರು ಅನ್ನುವ ಮಾಹಿತಿ ಲಭ್ಯವಾಗಿತ್ತು. ಗಂಗಾವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ತೆರಳುತ್ತಿದ್ದರು.
ಇದನ್ನೂ ಓದಿ: ಟೋಲ್ ಪ್ಲಾಜಾದಲ್ಲಿ ನಿಂತಿದ್ದ ವಾಹನಗಳಿಗೆ ಗುದ್ದಿದ ಇನ್ನೋವಾ: 3 ಸಾವು, 6 ಮಂದಿಗೆ ಗಾಯ