ಬೆಂಗಳೂರು: ಟಾಕಿಂಗ್ ಟಾಮ್ ಮಾದರಿಯ ಬೊಂಬೆಯ ಒಳಗಡೆ ಮಾದಕವಸ್ತು ಇಟ್ಟು ಮಾರಾಟ ಮಾಡುತ್ತಿದ್ದ ಮೂವರು ಡ್ರಗ್ ಪೆಡ್ಲರ್‌ಗಳನ್ನು ವೈಟ್‌ಫೀಲ್ಡ್ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪವೀಶ್(33), ಅಭಿಜಿತ್(25) ಮತ್ತು ಶಫಸುದ್ದೀನ್(29) ಬಂಧಿತರು. ಆರೋಪಿಗಳಿಂದ 15 ಲಕ್ಷ ರೂಪಾಯಿ ಬೆಲೆಬಾಳುವ 137 ಗ್ರಾಂ ತೂಕದ ಮಾದಕವಸ್ತು, ೪ ಮೊಬೈಲ್, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ವೈಟ್‌ಫೀಲ್ಡ್ ಠಾಣಾ ವ್ಯಾಪ್ತಿಯ ಪಟ್ಟಂದೂರು ಅಗ್ರಹಾರದ ಐಟಿಪಿಎಲ್ ಬ್ಯಾಕ್‌ಗೇಟ್ ಡಿಟಿಡಿಸಿ ಎಕ್ಸ್‌ಪ್ರೆಸ್ ಕೊರಿಯರ್ ಸರ್ವೀಸ್ ಬಳಿ ಸ್ಕೂಟರ್‌ನಲ್ಲಿ ಟಾಕಿಂಗ್ ಟಾಮ್ ಬೆಕ್ಕಿನ ಬೊಂಬೆ ಒಳಗೆ ಮಾದಕವಸ್ತು ಇಟ್ಟು ಕೋರಿಯರ್ ಮಾಡಲು ಮತ್ತು ಜೇಬಿನಲ್ಲಿಯೂ ಚಿಕ್ಕ ಚಿಕ್ಕ ಪ್ಯಾಕೆಟ್‌ಗಳ ಮಾದಕವಸ್ತುಗಳನ್ನು ಇಟ್ಟುಕೊಂಡು ಮಾರಾಟ ಮಾಡಲು ಬಂದಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವೈಟ್‌ಫೀಲ್ಡ್ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಗಿರೀಶ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೇರಳದಿಂದ ಮಂಗಳೂರಿಗೆ ಮಾದಕವಸ್ತು ಸಾಗಣೆ, ಮೂವರ ಬಂಧನ