ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮೂರು ಉಪ ಮುಖ್ಯಮಂತ್ರಿ ಸ್ಥಾನ ಕಲ್ಪಿಸುವ ಮೂಲಕ ಖಾತೆಗಳ ಹಂಚಿಕೆಯಲ್ಲಿ ಉದ್ಭವಿಸಲಿರುವ ಅಸಮಧಾನ ತಡೆಗೆ ಚಿಂತನೆ ನಡೆದಿದೆ ಎನ್ನುವ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಹರಿದಾಡುತ್ತಿವೆ.
ಒಂದು ಮೂಲದ ಪ್ರಕಾರ ಸಿಎಂ ಬಿಎಎಸ್ವೈ ಸಂಪುಟದಲ್ಲಿ ಮೂರು ಡಿಸಿಎಂ ಹುದ್ದೆ ರಚನೆ ಪಕ್ಕಾ ಆಗಿದೆ. ಲಿಂಗಾಯತ, ಒಕ್ಕಲಿಗ ಮತ್ತು ದಲಿತ ಸಮುದಾಯದವರಿಗೆ ಡಿಸಿಎಂ ಹುದ್ದೆ ನೀಡಲು ಚಿಂತಿಸಲಾಗಿದ್ದು, ಲಕ್ಷ್ಮಣ್ ಸವದಿ, ಡಾ.ಅಶ್ವತ್ಥ್ ನಾರಾಯಣ ಮತ್ತು ಗೋವಿಂದ ಕಾರಜೋಳರಿಗೆ ಡಿಸಿಎಂ ಪಟ್ಟ ಕಟ್ಟುವ ಸಾಧ್ಯತೆ ಬಗ್ಗೆ ಚಿಂತನೆ ನಡೆದಿದೆ ಎನ್ನಲಾಗಿದೆ. ಈ ಮೊದಲು ಡಿಸಿಎಂ ಹುದ್ದೆ ಬೇಡ ಅಂದಿದ್ದ ಹೈಕಮಾಂಡ್ ಈಗ ಯೂಟರ್ನ್ ಹೊಡೆದಿದ್ದು, ಮೂವರಿಗೆ ಡಿಸಿಎಂ ಹುದ್ದೆ ಕೊಡಲು ಸಮ್ಮತಿಸಿದೆ ಎಂದು ತಿಳಿದು ಬಂದಿದೆ.
ಡಿಸಿಎಂ ಹುದ್ದೆಗಳ ಸಂಬಂಧವೇ ಯಡಿಯೂರಪ್ಪ ಅವರು ಲಕ್ಷ್ಮಣ ಸವದಿ, ಡಾ. ಅಶ್ವತ್ಥ ನಾರಾಯಣ ಮತ್ತು ಗೋವಿಂದ ಕಾರಜೋಳ ಅವರನ್ನು ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.