ಬೆಂಗಳೂರು: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ.
ಈ ಹಿಂದೆ 2008ರಲ್ಲಿ ಬಿಜೆಪಿ ಸರ್ಕಾರದ ಆಡಳಿತ ಇದ್ದಾಗ ಇಬ್ಬರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಈಗ ಇದೇ ಪಕ್ಷದ ಸರ್ಕಾರದಲ್ಲಿ ಮೂವರಿಗೆ ಡಿಸಿಎಂ ಹುದ್ದೆ ನೀಡಿ ಇತಿಹಾಸ ನಿರ್ಮಾಣ ಮಾಡಲಾಗಿದೆ.
ಒಂದೇ ಪಕ್ಷದ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳ ನೇಮಕ ಮಾಡಿರುವುದು ರಾಜ್ಯ ರಾಜಕೀಯ ಇತಿಹಾಸದಲ್ಲಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದಂತಾಗಿದೆ.
ಸಮ್ಮಿಶ್ರ ಸರ್ಕಾರ ಇದ್ದಾಗ ಒಂದು ಪಕ್ಷಕ್ಕೆ ಮುಖ್ಯಮಂತ್ರಿ ಮತ್ತೊಂದು ಪಕ್ಷಕ್ಕೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದು ರೂಢಿ. ಒಂದೇ ಪಕ್ಷದ ಸರ್ಕಾರ ಇದ್ದಾಗಲು ಮುಖ್ಯಮಂತ್ರಿ ಕುರ್ಚಿಗೆ ಪೈಪೋಟಿ ಇದ್ದಾಗ ಅವರನ್ನು ಸಮಾಧಾನಪಡಿಸಲು ಉಪಮುಖ್ಯಮಂತ್ರಿ ಸ್ಥಾನ ನೀಡಿದ ಉದಾಹರಣೆಗಳು ರಾಜ್ಯದಲ್ಲಿವೆ.
ಮಾಜಿ ಪ್ರಧಾನಿ ದೇವೇಗೌಡ ಅವರು ಮುಖ್ಯಮಂತ್ರಿಗಳಾಗಿದ್ದಾಗ ಜೆ.ಹೆಚ್ ಪಟೇಲ್ ಅವರು ಡಿಸಿಎಂ ಆಗಿದ್ದರು. ಜೆ.ಹೆಚ್.ಪಟೇಲ್ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಎಂ.ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದಾಗ ಎಸ್.ಎಂ.ಕೃಷ್ಣ ಅವರು ಉಪಮುಖ್ಯಮಂತ್ರಿಗಳಾಗಿದ್ದರು. ಧರ್ಮಸಿಂಗ್ ಅವರು ಸಿಎಂ ಆಗಿದ್ದಾಗ ಕೆಲಕಾಲ ಸಿದ್ದರಾಮಯ್ಯ ನಂತರ ಎಂಪಿ ಪ್ರಕಾಶ್ ಉಪಮುಖ್ಯಮಂತ್ರಿ ಗಳಾಗಿದ್ದರು.
2006ರಲ್ಲಿ ಜೆಡಿಎಸ್ - ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆದ ಸಂದರ್ಭದಲ್ಲಿ ಯಡಿಯೂರಪ್ಪ ಡಿಸಿಎಂ ಆಗಿದ್ದರು. 2008ರಲ್ಲಿ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಉಪಮುಖ್ಯಮಂತ್ರಿಗಳಾಗಿದ್ದರು.
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂಗ್ರೆಸ್ ಪಕ್ಷದ ಡಾ. ಜಿ.ಪರಮೇಶ್ವರ್ ಡಿಸಿಎಂ ಆಗಿದ್ದರು.
ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಎನ್ನುವ ಹುದ್ದೆ ಇಲ್ಲ. ರಾಜಕೀಯ ಅನುಕೂಲಕ್ಕೋಸ್ಕರ ಅಧಿಕಾರ ಹಾಗೂ ಪ್ರತಿಷ್ಠಿಗಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ರಾಜಕೀಯ ಕಾರಣಗಳಿಗಾಗಿ ನೀಡುತ್ತಾ ಬರಲಾಗುತ್ತಿದೆ.