ಬೆಂಗಳೂರು: ಯಲಹಂಕ ಉಪನಗರ ಬಳಿ ಒಂದೇ ಕುಟುಂಬದ ಮೂವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನಂತಪುರ ನಿವಾಸಿ ವೆಂಕಟಪ್ಪ, ಪತ್ನಿ ನಾಗಮಣಿ ಹಾಗೂ ಪುತ್ರ ರವಿಕುಮಾರ್ ಆತ್ಮಹತ್ಯೆ ಮಾಡಿಕೊಂಡವರು ಎನ್ನಲಾಗಿದೆ.
ವೆಂಕಟಪ್ಪ ಮತ್ತು ನಾಗಮಣಿ ದಂಪತಿಗೆ ಇಬ್ಬರು ಪುತ್ರರಿದ್ದು, ಹಿರಿಯ ಪುತ್ರನಿಗೆ ವಿವಾಹವಾಗಿದೆ. ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ರವಿ ಕುಮಾರ್ ಕಿರಿಯ ಪುತ್ರನಾಗಿದ್ದು, ತಂದೆಯ ಜತೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು.
ವ್ಯವಹಾರಕ್ಕೆಂದು ಪರಿಚಯಸ್ಥರಲ್ಲಿ 27 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ತೀರಿಸಲು ಆಗಿಲ್ಲ. ಇದರಿಂದ ಮನನೊಂದಿದ್ದರು. ಇಂದು ಬೆಳಗ್ಗೆ ಹಿರಿಯ ಪುತ್ರ ಮತ್ತು ಆತನ ಪತ್ನಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಪುತ್ರ ಮತ್ತು ಸೊಸೆ ಕೆಲಸದಿಂದ ವಾಪಸ್ ಆದ ಬಳಿಕ ಮನೆ ಬಾಗಿಲು ತೆರೆದು ನೋಡಿದಾಗ ಸಂಗತಿ ಗೊತ್ತಾಗಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಕುಟುಂಬಸ್ಥರಿಂದ ಹೇಳಿಕೆ ಪಡೆದು, ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿದೆ. ಮೃತರಿಗೆ ಕೊರೊನಾ ಪರೀಕ್ಷೆಯ ವರದಿ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಯಲಹಂಕ ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.