ಬೆಂಗಳೂರು: ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದ್ದು, ರಾಜ್ಯದ ಮೂವರನ್ನು ಆಯ್ಕೆ ಮಾಡಿ ಪಕ್ಷದ ರಾಜ್ಯ ಪ್ರತಿಭೆಗಳಿಗೆ ಅವಕಾಶ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಧನ್ಯವಾದ ಸಮರ್ಪಿಸಿದ್ದಾರೆ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ರಾಜ್ಯದ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ರಾಷ್ಟ್ರೀಯ ವಕ್ತಾರರನ್ನಾಗಿ ಸಂಸದ ರಾಜೀವ್ ಚಂದ್ರಶೇಖರ್ ಮತ್ತು ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಸಂಸತ್ ಸದಸ್ಯ ತೇಜಸ್ವಿ ಸೂರ್ಯ ಅವರನ್ನು ನೇಮಕಗೊಳಿಸಿರುವುದಕ್ಕೆ ಪಕ್ಷದ ಕಾರ್ಯಕರ್ತರ ಪರವಾಗಿ ಬಿಜೆಪಿ ರಾಜ್ಯ ವಕ್ತಾರ ಕಾ. ಗಣೇಶ್ ಕಾರ್ಣಿಕ್ ವರಿಷ್ಠರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಿ.ಟಿ.ರವಿ ಅವರು ಹಲವಾರು ವರ್ಷಗಳಿಂದ ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದವರು. ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಸಂಘಟನಾ ಚಾತುರ್ಯ ಹೊಂದಿದವರು. ರಾಜೀವ್ ಚಂದ್ರಶೇಖರ್ ಅವರು ಅತ್ಯುತ್ತಮ ವಾಕ್ಚಾತುರ್ಯ ಹೊಂದಿದ್ದು ಪಕ್ಷದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಯುವಕರಾದ ತೇಜಸ್ವಿ ಸೂರ್ಯ ಯುವ ಮೋರ್ಚಾದಲ್ಲಿ ಈಗಾಗಲೇ ತಮ್ಮ ಕಾರ್ಯ ಸಾಮರ್ಥ್ಯವನ್ನು ತೋರಿದ್ದಾರೆ. ವಕೀಲರಾಗಿ, ಯುವ ಸಂಘಟಕರಾಗಿ ಯುವಮೋರ್ಚಾ ಮುನ್ನಡೆಸುವ ಜವಾಬ್ದಾರಿಯನ್ನು ನಿಭಾಯಿಸುವ ಸಾಮರ್ಥ್ಯವನ್ನು ಅವರು ಹೊಂದಿದ್ದಾರೆ. ಅವರ ಆಯ್ಕೆಯಿಂದ ಪಕ್ಷವು ರಾಜ್ಯದಲ್ಲಿ ಇನ್ನಷ್ಟು ಸದೃಢವಾಗಲಿದೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಆಶಿಸಿದ್ದಾರೆ.