ಬೆಂಗಳೂರು : ಸ್ಟಡಿ ಸೆಂಟರ್ ಹೆಸರಿನಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಭುರಾಜ್, ಮೈಲಾರಿ, ಮೊಹಮ್ಮದ್ ತೈಹೀದ್ ಬಂಧಿತ ಆರೋಪಿಗಳು. ಬಂಧಿತರಿಂದ ಪದವಿ, ಎಸ್ಎಸ್ಎಲ್ಸಿ, ಪಿಯುಸಿ ಮಾರ್ಕ್ಸ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. KIOS ಹೆಸರಿನಲ್ಲಿ ಹುಬ್ಬಳ್ಳಿಯ ಆರೋಪಿಗಳು ಕಚೇರಿ ತೆರೆದಿದ್ದರು. ಸದ್ಯ ಈ ಹುಬ್ಬಳ್ಳಿಯ ಕಚೇರಿ ಮೇಲೆ ಬೆಂಗಳೂರು ಸಿಸಿಬಿ ಅಧಿಕಾರಿಗಳು, ದಾಳಿ ನಡೆಸಿ ಅಂಕಪಟ್ಟಿ ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆ ಸ್ಟಡಿ ಸೆಂಟರ್ ನಡೆಸುತ್ತಿರುವುದು ಪತ್ತೆಯಾಗಿದ್ದು, ಸ್ಟಡಿ ಸೆಂಟರ್ ಮೂಲಕ 10ನೇ ತರಗತಿ, ಪಿಯುಸಿ ಹಾಗೂ ಪದವಿ ಮಾರ್ಕ್ಸ್ ಕಾರ್ಡ್ ತಯಾರು ಮಾಡಿ ಮಾರಾಟ ಮಾಡುತ್ತಿದ್ದರು. ಈ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ KIOS ನಲ್ಲಿ ಅಂಕ ಪಟ್ಟಿಗಳನ್ನು ವಿತರಿಸುತ್ತಿದ್ದರು.
ಇದನ್ನೂ ಓದಿ: ಹಣ ಕೊಟ್ಟರೆ ಇಲ್ಲಿ ಸಿಗುತ್ತೆ ಫೇಕ್ ಮಾರ್ಕ್ಸ್ ಕಾರ್ಡ್.. ಅಕ್ರಮ ಜಾಲ ಪತ್ತೆ ಹಚ್ಚಿದ ಸಿಸಿಬಿ
ಸರ್ಕಾರಕ್ಕೆ ಸಮಾನಾಂತರವಾಗಿ ಅನುಮತಿ ಇಲ್ಲದೆ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಸದ್ಯ ಆರೋಪಿಗಳಿಂದ 70 ಅಂಕಪಟ್ಟಿಗಳು, ನೋಂದಣಿ ಸಂಖ್ಯೆ ನಮೂದಿಸದ 190 ಅಂಕಪಟ್ಟಿ, ಯಾವುದೇ ಮಾಹಿತಿ ಇಲ್ಲದ 7100 ಅಂಕಪಟ್ಟಿ, 5500 ಉತ್ತರ ಪ್ರತಿಗಳು, 25 ಅಡ್ಮಿಷನ್ ರಿಜಿಸ್ಟರ್ಗಳು, ಕಲರ್ ಪ್ರಿಂಟ್, ಜೆರಾಕ್ಸ್ ಮಿಷನ್ ಸೀಜ್ ಮಾಡಲಾಗಿದೆ. ನಕಲಿ ಅಂಕಪಟ್ಟಿ ಬಗ್ಗೆ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಬಯಲು : ರಾಜಧಾನಿ ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಶೀಟ್ ದಂಧೆ ತಲೆ ಎತ್ತಿದ್ದು ಇದಕ್ಕೂ ಮುನ್ನ ಇಂಥದ್ದೊಂದು ಪ್ರಕರಣವನ್ನು ಸಿಸಿಬಿ ಪೊಲೀಸರು (ಆಗಸ್ಟ್ 13-2021) ರಂದು ಬಯಲಿಗೆಳೆದಿದ್ದರು. ಪಂಜಾಬ್ ಮೂಲದ ಮುಖೇಶ್ ಹಾಗೂ ರೋಹಿ ಎಂಬ ದಂಪತಿ ಸೇರಿಕೊಂಡು ಮಾರ್ಕ್ಸ್ ಕಾರ್ಡ್ ದಂಧೆ ನಡೆಸುತ್ತಿದ್ದರು. ಕಳೆದ ಮೂವತ್ತು ವರ್ಷಗಳಿಂದ ಬೆಂಗಳೂರಿನಲ್ಲೇ ನೆಲೆಸಿ ಪೀಣ್ಯ ಬಳಿಯ ಜಗತ್ ಜ್ಯೋತಿ ಎಜ್ಯುಕೇಶನ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದರು ಎಂದು ತಿಳಿದುಬಂದಿತ್ತು.
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ಫೈನಾನ್ಸ್ ಕಂಪನಿಗೆ ಟೋಪಿ ಹಾಕಿದ ವಂಚಕರು ಅಂದರ್
ಆರೋಪಿಗಳು ಎಂಎ, ಎಂಬಿಎ, ಬಿಸಿಎ, ಬಿಟೆಕ್, ಬಿಬಿಎ, ಬಿಕಾಂ, ಬಿಎಸ್ಸಿ ಸೇರಿ ಹಲವು ಡಿಗ್ರಿ ಮಾರ್ಕ್ಸ್ ಕಾರ್ಡ್ ನೀಡುತ್ತಿದ್ದರು. ಒಂದು ಡಿಗ್ರಿಗೆ ಅರವತ್ತರಿಂದ ಎಪ್ಪತ್ತು ಸಾವಿರದವರೆಗೆ ಹಣ ಪಡೆಯುತ್ತಿದ್ದರು. ಸಿವಿ ರಾಮನ್ ಯುನಿವರ್ಸಿಟಿ, ರವೀಂದ್ರನಾಥ ಠಾಗೋರ್ ಯುನಿವರ್ಸಿಟಿ, ಅಸೆಟ್ ಯುನಿವರ್ಸಿಟಿಗೆ ಸೇರಿದ ಅಂಕಪಟ್ಟಿಗಳನ್ನು ಆರೋಪಿಗಳು ನೀಡುತ್ತಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಐದು ನೂರಕ್ಕೂ ಹೆಚ್ಚು ಜನರಿಗೆ ಮಾರ್ಕ್ಸ್ ಕಾರ್ಡ್ ನೀಡಿರುವ ಬಗ್ಗೆ ಮಾಹಿತಿ ದೊರೆತಿದ್ದು, ಈ ಸಂಬಂಧ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಬಯಲು: ಪಂಜಾಬ್ ಮೂಲದ ದಂಪತಿ ಅರೆಸ್ಟ್