ಬೆಂಗಳೂರು: ಶಾಲೆ ತೊರೆದಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕರ್ನಾಟಕವು ದೇಶದಲ್ಲೇ 7 ನೇ ಸ್ಥಾನ ಪಡೆದುಕೊಂಡಿದ್ದು, ರಾಜ್ಯಾದ್ಯಂತ ಕಳೆದ ಐದು ವರ್ಷಗಳಲ್ಲಿ 57,785 ವಿದ್ಯಾರ್ಥಿಗಳು ಶಿಕ್ಷಣ ತೊರೆದಿದ್ದಾರೆ. ವಿದ್ಯಾರ್ಥಿಗಳು ಶಾಲೆ ತೊರೆಯುವುದನ್ನು ತಡೆಯಲು ಐದು ವರ್ಷದಲ್ಲಿ ಸರ್ಕಾರದಿಂದ ಬರೋಬ್ಬರಿ 1,099.63 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ. ಆದರೂ ಮಕ್ಕಳು ಶಾಲೆ ತೊರೆಯುವುದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಇದಕ್ಕೆ ಕಾರಣವೇನು, ಸರ್ಕಾರ ಏನೆಲ್ಲಾ ಕ್ರಮವಹಿಸಲು ಮುಂದಾಗಿದೆ ಎನ್ನುವ ಕುರಿತ ಒಂದು ವರದಿ ಇಲ್ಲಿದೆ.
ಶಾಲೆ ತೊರೆದ ಮಕ್ಕಳ ಸಂಖ್ಯೆಯಲ್ಲಿ ಕರ್ನಾಟಕವು ಇಡೀ ದೇಶದಲ್ಲೇ 7ನೇ ಸ್ಥಾನದಲ್ಲಿದೆ. ಬಂಡವಾಳ ಹೂಡಿಕೆ, ಅಭಿವೃದ್ಧಿ ದರ, ತೆರಿಗೆ ಸಂಗ್ರಹದಲ್ಲಿ ಮುಂಚೂಣಿಯಲ್ಲಿರುವ ರಾಜ್ಯವು ಶಾಲೆಗಳಿಂದ ಮಕ್ಕಳ ಡ್ರಾಪ್ ವಿಚಾರದಲ್ಲಿಯೂ ಮುಂದೆ ಇರುವುದು ತಲೆತಗ್ಗಿಸುವ ಸಂಗತಿಯಾಗಿದೆ. ಕಳೆದ 5 ವರ್ಷಗಳ ಅಂಕಿ ಅಂಶಗಳನ್ನು ಗಮನಿಸುವುದಾದರೆ 2018-19ರಲ್ಲಿ 7,605, 2019-20ರಲ್ಲಿ 17,298, 2020-21ರಲ್ಲಿ 8,476, 2021-22ರಲ್ಲಿ 18,461 ಮತ್ತು 2022-23ನೇ ಸಾಲಿನಲ್ಲಿ 5,945 ವಿದ್ಯಾರ್ಥಿಗಳು ಶಾಲೆ ತೊರೆದಿದ್ದಾರೆ.
ಸಮಗ್ರ ಶಿಕ್ಷಣ ಯೋಜನೆಯಡಿ ಶಾಲೆ ತೊರೆಯುವುದನ್ನು ತಡೆಯಲು ಕಳೆದ ಐದು ವರ್ಷಗಳಲ್ಲಿ 1,099.63 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. 2018-19ರಲ್ಲಿ 688.99 ರೂ., 2019-20ರಲ್ಲಿ 149.29 ರೂ., 2020-21ರಲ್ಲಿ 42.33 ರೂ., 2021-22ರಲ್ಲಿ 208.08 ರೂ. ಮತ್ತು 2022-23ನೇ ಸಾಲಿನಲ್ಲಿ 10.94 ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೂ ವಿದ್ಯಾರ್ಥಿಗಳು ಶಾಲೆಯಿಂದ ದೂರವಾಗುತ್ತಿದ್ದಾರೆ.
ವಿದ್ಯಾರ್ಥಿಗಳು ಶಾಲೆ ತೊರೆಯಲು 10 ಕಾರಣಗಳನ್ನು ಸರ್ಕಾರದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ವಲಸೆ ಜೀವನ, ಕೌಟುಂಬಿಕ ಸಮಸ್ಯೆ, ಮಕ್ಕಳ ಅನಾರೋಗ್ಯ, ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಕಾರಣ, ಹೆಣ್ಣು ಮಗು ಪ್ರೌಢಾವಸ್ಥೆಗೆ ಬರುವುದು, ಅಲೆಮಾರಿ ಜೀವನ, ತೀವ್ರ ಅಂಗವಿಕಲತೆ, ಬುಡಕಟ್ಟು ಜನಾಂಗದ ಮಕ್ಕಳು, ಅನಾಥ ಮಗು, ಬೀದಿಮಗು ಅಥವಾ ಚಿಂದಿ ಆಯುವ ಮಗು ಎನ್ನುವುದು ಮಕ್ಕಳು ಶಾಲೆಯಿಂದ ದೂರ ಉಳಿಯಲು ಕಾರಣ ಎಂದು ತಿಳಿದುಬಂದಿದೆ.
ಶಿಕ್ಷಣ ಸಚಿವರು ಹೇಳುವುದೇನು?: ''ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಸಹಭಾಗಿತ್ವದಲ್ಲಿ ವಲಸೆ ಮಕ್ಕಳನ್ನು ಪತ್ತೆ ಹಚ್ಚಿ ಶಿಕ್ಷಣ ಮುಖ್ಯವಾಹಿನಿಗೆ ತರಲು ಶಿಕ್ಷಣ ಇಲಾಖೆ ಕಾರ್ಯತಂತ್ರ ರೂಪಿಸಿದೆ. ವಲಸೆ ಮಕ್ಕಳನ್ನು ಶಿಕ್ಷಣ ಮುಖ್ಯವಾಹಿನಿಗೆ ತರಲು ದುರ್ಬಲ ಮತ್ತು ಅವಕಾಶ ವಂಚಿತ ಮಕ್ಕಳಿಗೆ ಮತ್ತು ವಲಸಿತ ಮಕ್ಕಳಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ವಸತಿ ಶಾಲೆ, ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ನಿಲಯ, ಕರ್ನಾಟಕ ಕಸ್ತೂರ ಬಾ ಗಾಂಧಿ ವಸತಿ ಶಾಲೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಗಳ ವಸತಿ ನಿಲಯಗಳಲ್ಲಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ'' ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ತಿಳಿಸಿದ್ದಾರೆ.
''ಮಕ್ಕಳು ಶಾಲೆ ತೊರೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲಾ ಹಂತದಲ್ಲಿ ಮುಖ್ಯ ಶಿಕ್ಷಕರು, ಕ್ಲಸ್ಟರ್ ಹಂತದಲ್ಲಿ ಕ್ಲಸ್ಟರ್ಸ್ ಸಂಪನ್ಮೂಲ ವ್ಯಕ್ತಿ, ಹೋಬಳಿ ಮಟ್ಟದಲ್ಲಿ ಶಿಕ್ಷಣ ಸಂಯೋಜನಾಧಿಕಾರಿಗಳು, ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು ಹಾಗೂ ಜಿಲ್ಲಾ ಹಂತದಲ್ಲೂ ಉಪ ನಿರ್ದೇಶಕರು ಅಥವಾ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿಗಳ ಜವಾಬ್ದಾರಿಯಾಗಿದೆ'' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಅಧಿಕಾರಿಗಳ ಪ್ರತಿಕ್ರಿಯೆ: ಶಾಲೆ ತೊರೆದ 16ರಿಂದ 18ನೇ ವಯೋಮಾನದ ವಿದ್ಯಾರ್ಥಿಗಳ ಸಂಖ್ಯೆ ದೇಶದಲ್ಲೇ ರಾಜ್ಯ 7ನೇ ಸ್ಥಾನ ಪಡೆದಿದೆ ಎನ್ನುವುದು ಅಂಕಿ ಅಂಶಗಳ ಆಧಾರಿತ ಮಾಹಿತಿಯಾಗಿದೆ. ಆದರೆ 10ನೇ ತರಗತಿ ಮುಗಿದ ನಂತರ ವಿದ್ಯಾರ್ಥಿಗಳು ಐಟಿಐ, ಡಿಪ್ಲೊಮಾ ಮತ್ತು ಪಾಲಿಟೆಕ್ನಿಕ್ನಂತಹ ಕೋರ್ಸ್, ಎನ್ಟಿಟಿಎಫ್, ನರ್ಸಿಂಗ್, ಜಿಟಿಟಿಸಿ, ಪಿಎಂಕೆಕೆವೈ ಮತ್ತು ಜಿಎಂಕೆಕೆವೈನಂತಹ ವೃತ್ತಿಪರ ಕೋರ್ಸ್ ತೆಗೆದುಕೊಳ್ಳುವಂತಹ ವಿವಿಧ ಕಾರಣಗಳಿಂದಾಗಿ ಕರ್ನಾಟಕದಲ್ಲಿ ಮಾಧ್ಯಮಿಕ ಹಂತ ಮತ್ತು ಹೈಯರ್ ಸೆಕೆಂಡರಿ ಹಂತಗಳಲ್ಲಿ ಡ್ರಾಪ್ ಔಟ್ ಪ್ರಮಾಣ ಹೆಚ್ಚಾಗಿದೆ. 10ನೇ ತರಗತಿ ಉತ್ತೀರ್ಣರಾದ ನಂತರ ಎಲ್ಲರೂ ಪ್ರಥಮ ಪಿಯುಸಿಗೆ ದಾಖಲಾಗದೆ ಕೆಲವರು ವೃತ್ತಿಪರ ಕೋರ್ಸ್ಗಳಿಗೆ ದಾಖಲಾಗುತ್ತಾರೆ. ಹಾಗಾಗಿ ಆ ಎಲ್ಲಾ ಅಂಕಿ-ಅಂಶ ಕಲೆಹಾಕಿದ ನಂತರವೇ ನಿಖರವಾಗಿ ಶಾಲೆಯಿಂದ ದೂರ ಉಳಿದವರ ವಿವರ ಸ್ಪಷ್ಟವಾಗಲು ಸಾಧ್ಯವಾಗಿದ್ದು, ಇಲಾಖೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪತ್ತೆ ಕಾರ್ಯಕ್ಕೆ ಮುಂದಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಾಧನೆ: ಕೆಎಂಎಫ್-24ರಲ್ಲಿ 3ನೇ ಸ್ಥಾನ