ಬೆಂಗಳೂರು : ಲಾಕ್ಡೌನ್ ಹಿನ್ನೆಲೆ ಮದ್ಯ ಮಾರಾಟ 48 ದಿನಗಳಿಂದ ನಿಂತಿದೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ವೆದೇವೆ. ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಮದ್ಯಪಾನ ನಿಷೇಧ ಜಾರಿಗೆ ತನ್ನಿ ಎಂದು ಒತ್ತಾಯಿಸಿ ಮಾಜಿ ಸಚಿವ ಹೆಚ್ ಕೆ ಪಾಟೀಲ್ ಅವರು ಸಿಎಂಗೆ ಪತ್ರ ಬರೆದಿದ್ದಾರೆ.
ಮದ್ಯಪಾನವನ್ನು ಚಟವಾಗಿ ಮಾಡಿಕೊಂಡವರು ಸ್ವಲ್ಪ ದಿನ ಕಷ್ಟಪಟ್ಟರೂ ಇದೀಗ ಸಾರಾಯಿ ಇಲ್ಲದೆ ಬದುಕುತ್ತಿದ್ದಾರೆ. ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದು, ಇದರಿಂದ ಅನೇಕ ಲಾಭಗಳಾಗುತ್ತಿವೆ. ಮದ್ಯಪಾನದಿಂದ ಆಲಸ್ಯ, ಅಧಿಕಾರ ದುರುಪಯೋಗ, ಜಗಳ, ಭ್ರಷ್ಟಾಚಾರ, ಅಶಾಂತಿ ವಾತಾವರಣ ಸೃಷ್ಟಿಯಾಗುತ್ತದೆ. ಇದನ್ನು ನಿಷೇಧಿಸುವುದು ಅತ್ಯವಶ್ಯಕ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಮದ್ಯಪಾನ ನಿಷೇಧದಿಂದ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗುತ್ತದೆ ಎಂದು ಹಲವರು ವಾದಿಸುತ್ತಾರೆ. ಆದರೆ, ಮದ್ಯಪಾನ ನಿಷೇಧದಿಂದ ಕೌಟುಂಬಿಕ ನೆಮ್ಮದಿ ಹೆಚ್ಚಿ, ಮಕ್ಕಳು ಉತ್ತಮ ಸಂಸ್ಕಾರ ಪಡೆಯುತ್ತಾರೆ, ಮಹಿಳೆಯರ ಶೋಷಣೆ ತಪ್ಪುತ್ತದೆ. ಈ ಶಾಂತಿ, ನೆಮ್ಮದಿಯು ಹಣ ಕೊಟ್ಟರೂ ಬರುವುದಿಲ್ಲ ಎಂಬುದನ್ನು ತಾವೂ ಒಪ್ಪುತ್ತೀರ ಎಂದು ತಿಳಿಸಿದ್ದಾರೆ.
ಮದ್ಯಪಾನ ನಿಷೇಧ ಕಠಿಣ ಕೆಲಸ. ಆದರೆ, ಶ್ರೇಷ್ಠ ಕೆಲಸ. ಪ್ರಕೃತಿ ಸೃಷ್ಟಿಸಿರುವ ಈ ಪರಿಸ್ಥಿತಿಯ ಪ್ರಯೋಜನ ಪಡೆದು ದೃಢ ಸಂಕಲ್ಪದಿಂದ ಮದ್ಯಪಾನ ನಿಷೇಧಿಸಿ ಎಂದು ಸಿಎಂಗೆ ಪತ್ರದ ಮೂಲಕ ಒತ್ತಾಯಿಸಿದ್ದಾರೆ.